ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಸಾಂಪ್ರದಾಯಿಕ ‘ಸಾಸನಕಾಠಿ’ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಗ್ರಾಮದ ಪ್ರಮುಖ ಗಲ್ಲಿಗಳಲ್ಲಿ ಸಾಸನಕಾಠಿಗಳ ಭವ್ಯ ಮೆರವಣಿಗೆ ನಡೆದಿದ್ದು, ನೂರಾರು ಭಕ್ತರು ಕಾಲ್ನಡಿಗೆಯ ಮೂಲಕ ಶ್ರೀ ಜ್ಯೋತಿಬಾ ಗುಡ್ಡದತ್ತ ಪ್ರಯಾಣ ಬೆಳೆಸಿದ್ದಾರೆ.

ಬೆಳಗಾವಿ ತಾಲೂಕಿನ ಹಲಗಾ ಗ್ರಾಮದ ಸಂತಾಜಿ ಮತ್ತು ಕಾಮತಿ ಬಂಧುಗಳ ‘ಸಾಸನಕಾಠಿ’ಗಳು ಶ್ರೀ ಜ್ಯೋತಿಬಾ ಗುಡ್ಡದತ್ತ ಪಾದಯಾತ್ರೆ ಹೊರಟಿವೆ. ಗ್ರಾಮದ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮೀ ಮಂದಿರಕ್ಕೆ ತಲುಪಿದ ಸಾಸನಕಾಠಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಇಡೀ ಗ್ರಾಮದಾದ್ಯಂತ ಭವ್ಯ ಮೆರವಣಿಗೆ ನಡೆಸಲಾಯಿತು. ಗ್ರಾಮದ ಪ್ರತಿ ಗಲ್ಲಿಗಳಲ್ಲಿಯೂ ಭಕ್ತರು ಸಾಸನಕಾಠಿಗಳನ್ನು ಭಕ್ತಿಯಿಂದ ಬರಮಾಡಿಕೊಂಡು ಸ್ವಾಗತಿಸಿದರು. ಈ ಪವಿತ್ರ ಸಾಸನಕಾಠಿಗಳು ಮುಂಬರುವ ಸೋಮವಾರದಂದು ಜ್ಯೋತಿಬಾ ಗುಡ್ಡವನ್ನು ತಲುಪಲಿವೆ ಎಂದು ಭಕ್ತಾದಿಗಳು ತಿಳಿಸಿದ್ದಾರೆ.

ಮೆರವಣಿಗೆಯ ಉದ್ದಕ್ಕೂ ‘ಶ್ರೀ ಜ್ಯೋತಿಬಾ’ ನಾಮದ ಜಯಘೋಷ ಮೊಳಗುತ್ತಿತ್ತು. ಗುಲಾಲ್ ಎ ಎರಚುತ್ತಾ ಸಾಗಿದ ಈ ಸಂಭ್ರಮದಲ್ಲಿ ಅಬಾಲವೃದ್ಧರಾದಿಯಾಗಿ ಇಡೀ ಗ್ರಾಮವೇ ಪಾಲ್ಗೊಂಡಿತ್ತು. ಹಿರಿಯರು ಮತ್ತು ಯುವಕರು ಸಾಸನಕಾಠಿಗಳನ್ನು ಹೊತ್ತು ಸಾಗುತ್ತಿದ್ದರೆ, ಮಹಿಳೆಯರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ಶ್ರದ್ಧಾಭಕ್ತಿಯಿಂದ ಪಾದಯಾತ್ರೆ ಕೈಗೊಂಡಿರುವ ಭಕ್ತರು, ಜ್ಯೋತಿಬಾ ಗುಡ್ಡದಲ್ಲಿ ಸಾಸನಕಾಠಿಗಳನ್ನು ಸಮರ್ಪಿಸಿ ಹರಕೆ ತೀರಿಸಲಿದ್ದಾರೆ.
