BELAGAVI

ಜೆ.ಸಿ.ಇ ಬೆಳಗಾವಿಯಲ್ಲಿ ಕನ್ನಡದ ಕಂಪು: ಜಿಲ್ಲಾಧಿಕಾರಿಗಳಿಂದ ಅದ್ದೂರಿ ‘ಕನ್ನಡ ಸಂಭ್ರಮ-2026’ ಉದ್ಘಾಟನೆ

Share

ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (JCE) ಕನ್ನಡದ ಸೌರಭ ಮೊಳಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಅದ್ದೂರಿ ‘ಕನ್ನಡ ಸಂಭ್ರಮ’ವು ನಾಡು-ನುಡಿಯ ಅಭಿಮಾನವನ್ನು ವಿದ್ಯಾರ್ಥಿಗಳಲ್ಲಿ ಜಾಗೃತಗೊಳಿಸಿತು.

ಮಾರ್ಚ್ 26ರಂದು ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಬಳಗದಿಂದ ‘ಕನ್ನಡ ಸಂಭ್ರಮ-2026’ ಅತ್ಯಂತ ಉತ್ಸಾಹದಿಂದ ಜರುಗಿತು. ಕಾರ್ಯಕ್ರಮದ ಆರಂಭದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಂತರ ಜಾನಪದ ಕಲೆಯಾದ ಡೋಳ್ಳು ಕುಣಿತದೊಂದಿಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿಯುವುದರ ಮಹತ್ವವನ್ನು ಒತ್ತಿ ಹೇಳಿದರು. ಬೆಳಗಾವಿಯಲ್ಲಿ ಶೇ. 99.9ರಷ್ಟು ಸಮಸ್ಯೆಗಳು ಪರಸ್ಪರ ನಂಬಿಕೆ ಮತ್ತು ಸಂವಹನದಿಂದ ಬಗೆಹರಿಯುತ್ತವೆ ಎಂದು ಅವರು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಜೆ.ಸಿ.ಇ ಆಡಳಿತ ಮಂಡಳಿಯ ಸದಸ್ಯರಾದ ಪ್ರೊ. ಉದಯ ಚಂದ್ರ, ಮುಖ್ಯ ಅತಿಥಿ ಶ್ರೀಮತಿ ಭಾರತಿ ಬಸವರಾಜ ಮಾಡಬಾವಿ, ಪ್ರಾಚಾರ್ಯರಾದ ಡಾ. ಜೆ. ಶಿವಕುಮಾರ್, ಸಮನ್ವಯಾಧಿಕಾರಿ ಡಾ. ಸಂಜೀವ್ ಸಂಗಮಿ, ಸಂಚಾಲಕ ಡಾ. ರೋಹಿತ್ ರಾಜ್ ಹಾಗೂ ಕನ್ನಡ ಬಳಗದ ವಿದ್ಯಾರ್ಥಿ ಅಧ್ಯಕ್ಷ ಕುಶಾಲ ಘೋಡಗೇರಿ ಉಪಸ್ಥಿತರಿದ್ದರು. ಸಮಾರಂಭದ ಕೊನೆಯಲ್ಲಿ ನಡೆದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದವರ ಮನಸೂರೆಗೊಂಡವು. ಈ ಮೂಲಕ ಕನ್ನಡ ಸಂಭ್ರಮವು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಯಿತು.

Tags:

error: Content is protected !!