BELAGAVI

ಬೆಳಗಾವಿಯಲ್ಲಿ 5 ವರ್ಷದ ಬಳಿಕ ಕಂದಾಯ ನೌಕರರ ಕ್ರೀಡಾಕೂಟ…

Share

ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಕಂದಾಯ ಇಲಾಖೆಯ ನೌಕರರ ಶಕ್ತಿ ಪ್ರದರ್ಶನ ಏರ್ಪಟ್ಟಿದೆ. ಸದಾ ಕಡತಗಳ ಮಧ್ಯೆ ಮುಳುಗಿರುವ ನೌಕರರಿಗೆ ಉಲ್ಲಾಸ ನೀಡಲು ಹಮ್ಮಿಕೊಳ್ಳಲಾದ ಕ್ರೀಡಾಕೂಟಕ್ಕೆ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತದ ವತಿಯಿಂದ ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಕಂದಾಯ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಅತ್ಯಂತ ಸಡಗರದಿಂದ ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಕಂದಾಯ ನೌಕರರು ಆಕರ್ಷಕ ಪಥ ಸಂಚಲನ ನಡೆಸಿ ಅತಿಥಿಗಳಿಗೆ ಗೌರವ ಸಲ್ಲಿಸಿದರು.

ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಬೆಳಗಾವಿ ನಗರ ಪೋಲಿಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡರು. ನಂತರ ಕ್ರೀಡಾ ಫಲಕ ಅನಾವರಣಗೊಳಿಸಿ, ಬಲೂನ್ ಹಾರಿಸುವುದರ ಮೂಲಕ ಕ್ರೀಡಾಕೂಟವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಇದೇ ವೇಳೆ ಕ್ರೀಡಾಕೂಟದ ಶಪಥವನ್ನು ಕೂಡ ಬೋಧಿಸಲಾಯಿತು.

ನಂತರ ಬೆಳಗಾವಿ ಆರ್. ಕೆ.ಎಂ ಜಾನಕಿ, ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್, ಕಮಿಷ್ನರ್ ಭೂಷಣ್ ಬೋರಸೆ, ಎಸ್ಪಿ. ಕೆ. ರಾಮರಾಜನ್ ಅವರು ಸ್ವತಃ ವ್ಹಾಲಿಬಾಲ್ ಆಡುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆಯನ್ನು ನೀಡಿದ್ದು, ವಿಶೇಷವಾಗಿತ್ತು.

ಬಳಿಕ ಉದ್ಘಾಟನಾ ಪರ ನುಡಿಗಳನ್ನಾಡಿದ ಪ್ರಾದೇಶಿಕ ಆಯುಕ್ತರಾದ ಕೆ. ಎಂ. ಜಾನಕಿ ಅವರು ಕಳೆದ 5 ವರ್ಷಗಳ ನಂತರ ಕಂದಾಯ ಇಲಾಖೆಯಲ್ಲಿ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿದೆ. ಎಲ್ಲರೂ ಕ್ರೀಡಾಸ್ಫೂರ್ತಿಯಿಂದ ಆಟವಾಡಿ. ಕ್ರೀಡಾಕೂಟವನ್ನು ಆಯೋಜಿಸಿದ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ಅವರು ವಹಿಸಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಕೆ. ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು, ಆರೋಗ್ಯ ಅಮೂಲ್ಯವಾದದ್ದಾಗಿದೆ. ಪ್ರತಿದಿನ ಒತ್ತಡದ ಜೀವನದಲ್ಲಿರುವ ಸರ್ಕಾರಿ ನೌಕರರು, ಬೆಳಿಗ್ಗೆ ಅಥವಾ ಸಂಜೆ ಕೆಲ ಕಾಲ ಆರೋಗ್ಯಕ್ಕಾಗಿ ಸಮಯವನ್ನು ಮೀಸಲಿಡಿ, ವ್ಯಾಯಾಮವನ್ನು ಮಾಡಿ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮರಾಜನ್ ಕೆ. ಅವರು ಆಟದಲ್ಲಿನ ಸೋಲು-ಗೆಲುವು ನಮಗೆ ಪ್ರೇರಣೆಯನ್ನು ನೀಡುತ್ತದೆ. ಯಾವುದೇ ತರಬೇತಿ ಪಡೆಯದೇ ಅತ್ಯಂತ ಚೆನ್ನಾಗಿ ಪಥಸಂಚಲನವನ್ನು ಮಾಡಲಾಗಿದೆ ಎಂದು ಪ್ರಶಂಸಿಸಿದರು. ಕೋವಿಡ್ ನಂತರ ಮೊದಲ ಬಾರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಇಲಾಖೆಗಳು ಒಂದಾಗಿ ಕಾರ್ಯನಿರ್ವಹಿಸುತ್ತಿರುವುದು ಮಾದರಿಯಾಗಿದೆ. ಎಲ್ಲ ನೌಕರರು ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕೆಂದು ಹೇಳಿದರು.

ಬೆಳಗಾವಿ ಉಪವಿಭಾಗಾಧಿಕಾರಿಗಳಾದ ಶ್ರವಣ ನಾಯ್ಕ ಅವರು ಅತಿಥಿಗಳನ್ನು ಸ್ವಾಗತಿಸಿದರೆ, ಬೈಲಹೊಂಗಲ ಉಪವಿಭಾಗಾಧಿಕಾರಿಗಳಾದ ಪ್ರವೀಣ ಜೈನ್ ಅವರು ವಂದನಾರ್ಪಣೆ ಮಾಡಿದರು. ವಿವಿಧ ತಂಡಗಳು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದವು.

Tags:

error: Content is protected !!