ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ವೇಗವಾಗಿ ಬಂದ ಥಾರ್ ಕಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಯುವಕನೊಬ್ಬ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿರುವ ಘಟನೆ ಮುನವಳ್ಳಿ ಪಟ್ಟಣದ ಬಳಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದ ಬಳಿ ಈ ಕರುಣಾಜನಕ ಘಟನೆ ಸಂಭವಿಸಿದೆ. ಮೃತರನ್ನು ಗೋರವನಕ್ಕೊಳ್ಳ ಗ್ರಾಮದ ನಿವಾಸಿ ಮಂಜು ಯಲ್ಲಪ್ಪ ಕಮತರ (35) ಎಂದು ಗುರುತಿಸಲಾಗಿದೆ. ಮಂಜು ಅವರು ತಮ್ಮ ಬೈಕ್ನಲ್ಲಿ ಮುನವಳ್ಳಿಯಿಂದ ಸವದತ್ತಿ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎದುರುಗಡೆಯಿಂದ ಅಂದರೆ ಸವದತ್ತಿಯಿಂದ ಮುನವಳ್ಳಿ ಕಡೆಗೆ ಬರುತ್ತಿದ್ದ ಥಾರ್ ಕಾರಿನ ಬಲಭಾಗಕ್ಕೆ ಬೈಕ್ ನೇರವಾಗಿ ಮತ್ತು ಅತೀ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಡಿಕ್ಕಿ ಹೊಡೆದ ತಕ್ಷಣ ಬೈಕ್ ಸವಾರ ಮಂಜು ಅವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿದ ಕೂಡಲೇ ಸವದತ್ತಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
