ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಕಳ್ಳರ ಕಾಟ ಹೆಚ್ಚಾಗುತ್ತಿದ್ದು, ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ. ಪಟ್ಟಣದ ಮಹಾವೀರ್ ಸರ್ಕಲ್ನಲ್ಲಿರುವ ಪ್ರಮೋದ್ ಟ್ರೇಡರ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ವಿರೇಂದ್ರ ಪಾಂಡ್ರೆ ಅವರಿಗೆ ಸೇರಿದ ಈ ಅಂಗಡಿಯಲ್ಲಿ ನುಗ್ಗಿದ ಕದೀಮರು ಸುಮಾರು 5 ಸಾವಿರ ರೂ. ನಗದು ಹಾಗೂ ಸುಮಾರು 3 ಲಕ್ಷ ರೂ. ಮೌಲ್ಯದ ಸಿಗರೇಟ್ ಮತ್ತು ಪಾನ್ ಮಸಾಲಾ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ಬಳಿಕ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ನನ್ನೂ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಇಂಡಿ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ನಿರಂತರವಾಗಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಕಳ್ಳರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದೇ ಪ್ರಮೋದ್ ಟ್ರೇಡರ್ಸ್ ಅಂಗಡಿಗೆ ಸುಮಾರು ಮೂರು ವರ್ಷಗಳ ಹಿಂದೆ ಅಪರಿಚಿತರು ಬೆಂಕಿ ಹಚ್ಚಿದ ಘಟನೆ ಕೂಡ ನಡೆದಿತ್ತು. ಆ ಸಂದರ್ಭದಲ್ಲಿ ಸುಮಾರು 30 ಲಕ್ಷ ರೂ. ಮೌಲ್ಯದ ವಸ್ತುಗಳು ಸುಟ್ಟು ಹಾನಿಗೊಳಗಾಗಿದ್ದವು. ಇದೀಗ ನಡೆದ ಕಳ್ಳತನವೂ ಉದ್ದೇಶಪೂರ್ವಕವಾಗಿರಬಹುದೆಂದು ಅಂಗಡಿ ಮಾಲೀಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
