Kagawad

ಕಾಗವಾಡದಲ್ಲಿ ಎಸ್‌ಸಿ, ಎಸ್‌ಟಿ ಸಮಾಜದ ಕುಂದುಕೊರತೆ ಆಲಿಸುವ ಸಭೆಯಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಅಧಿಕಾರಿಗಳ ಮುಂದೆ ಎಸೆದು ಎಸ್‌ಟಿ ಸಮಾಜದ ಆಕ್ರೋಶ.

Share

ಕಾಗವಾಡ ತಹಶೀಲ್ದಾರ್ ಕಚೇರಿಯಿಂದ ಅಂಬಿಗರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ ನೀಡಿ ಎಂದು ರಾಜ್ಯ ಸರ್ಕಾರದ ಆದೇಶವಿದ್ದರೂ, ವಾಲ್ಮೀಕಿ ಸಮಾಜದ ಸಂಘಟನೆಯ ವತಿಯಿಂದ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮನವಿ ಮಾಡಿಕೊಳ್ಳಲಾಯಿತು. ಕಾಗವಾಡ ತಾಲೂಕಿನಲ್ಲಿ ಸುಮಾರು 1200 ನಕಲಿ ಜಾತಿ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದ್ದು; ಕೋಳಿ, ಕಬ್ಬಲಿಗ, ಅಂಬಿಗ, ತಳವಾರ್ ಹಾಗೂ ಪರಿವಾರ ಜಾತಿಗಳಿಗೆ ಎಸ್‌ಟಿ ಪ್ರಮಾಣಪತ್ರ ನೀಡಿರುವುದು ತಪ್ಪು ಎಂದು ಪ್ರತಿಭಟನಾಕಾರರು ದೂರಿದರು. ನಾವು ಈ ಬಗ್ಗೆ ವಿಚಾರಿಸಿದಾಗ ಯಾವುದೇ ತಪ್ಪು ಪ್ರಮಾಣಪತ್ರ ನೀಡಿಲ್ಲ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಈ ಕಾರಣದಿಂದ ಪರಿಶಿಷ್ಟ ಪಂಗಡದ ಸಮಾಜಕ್ಕೆ ಕಾಗವಾಡ ತಹಶೀಲ್ದಾರರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ, ಕಾಗವಾಡ ತಾಲೂಕು ವಾಲ್ಮೀಕಿ ಸಮಾಜ ಸಂಘಟನೆಯ ಅಧ್ಯಕ್ಷ ರಮೇಶ್ ನಾಯಕ್ ಅವರು 1200 ಜಾತಿ ಪ್ರಮಾಣಪತ್ರಗಳ ನಕಲು ಪ್ರತಿಯನ್ನು ಸಭೆಯಲ್ಲಿ ಅಧಿಕಾರಿಗಳ ಮುಂದೆ ಎಸೆದು ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿದರು.

ಶುಕ್ರವಾರದಂದು ಕಾಗವಾಡದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಸಭಾಭವನದಲ್ಲಿ ಎಸ್‌ಸಿ ಹಾಗೂ ಎಸ್‌ಟಿ ಸಮಾಜದ ತಾಲೂಕು ಮಟ್ಟದ ಕುಂದುಕೊರತೆಗಳನ್ನು ಚರ್ಚಿಸುವ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಎಸ್‌ಟಿ ಸಮಾಜದ ಕಾರ್ಯಕರ್ತರು ಒಗ್ಗೂಡಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ವಿವರಿಸಿದರು. ಅಧಿಕಾರಿಗಳು ಯಾವುದೇ ನಕಲಿ ಪ್ರಮಾಣಪತ್ರ ನೀಡಿಲ್ಲ ಎಂದು ಸ್ಪಷ್ಟಪಡಿಸಿದಾಗ, ಅಂಬಿಗರ ಸಮಾಜಕ್ಕೆ ನೀಡಲಾದ 1200 ಪ್ರಮಾಣಪತ್ರಗಳ ದಾಖಲೆಗಳನ್ನು ಸಂಗ್ರಹಿಸಿ ತಂದಿದ್ದ ಕಾರ್ಯಕರ್ತರು ಅವುಗಳನ್ನು ಅಧಿಕಾರಿಗಳ ಮೇಲೆ ಎಸೆದರು. ಇದರಿಂದ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು.

ಎಸ್‌ಟಿ ಸಮಾಜದ ಕಾರ್ಯಕರ್ತರಾದ ರಮೇಶ್ ನಾಯಕ್, ಪರಸಪ್ಪಾ ನಾಯಕ್, ಅಶೋಕ್ ಮಕ್ಕನವರ್, ರಾಮ ನಾಯಕ್, ಸಂತೋಷ್ ಮಗದುಮ್, ಪ್ರವೀಣ್ ಕೆಂಪೇಗೌಡ ಅವರು ಅಧಿಕಾರಿಗಳನ್ನು ಪ್ರಶ್ನಿಸಿ, ಬರುವ ಒಂದು ವಾರದಲ್ಲಿ ನಮ್ಮ ಬೇಡಿಕೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿದ್ದರೆ ತಹಶೀಲ್ದಾರ್ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಏಕೆಂದರೆ ಪರಿಶಿಷ್ಟ ಪಂಗಡದ ಪರ್ಯಾಯ ಪದಗಳಾದ ನಾಯಕ, ನಾಯಕಡ, ತಳವಾರ ಮತ್ತು ಪರಿವಾರದವರಿಗೆ ಪ್ರಮಾಣಪತ್ರ ಕೊಡಬೇಕು ಎಂಬ ಆದೇಶವಿದೆ. ಆದರೆ ಇಲ್ಲಿ ಕಾಗವಾಡ ತಾಲೂಕಿನಲ್ಲಿ ಗಂಗಾಮತ ಹಾಗೂ ಅಂಬಿಗ ಸಮುದಾಯದಲ್ಲಿ ಬರುವ ತಳವಾರ, ಪರಿವಾರ ಮತ್ತು ಕೋಳಿ ಸಮುದಾಯದ ಜನರಿಗೂ ನೀಡಲಾಗುತ್ತಿದೆ. ಅಲ್ಲದೆ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 19/02/2026 ರಂದು ಗಂಗಾಮತ ಹಾಗೂ ಅಂಬಿಗ ಸಮುದಾಯದಲ್ಲಿ ಬರುವ ತಳವಾರ ಮತ್ತು ಪರಿವಾರದವರನ್ನು ಸೇರಿಸಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಕುಲಶಾಸ್ತ್ರ ಅಧ್ಯಯನ ಮಾಡಲು ಶಿಫಾರಸು ಮಾಡಿದ್ದಾರೆ.

ಸಭೆಯಲ್ಲಿ ಕಾಗವಾಡ ತಾಲೂಕಿನ ಐನಾಪುರ, ಉಗಾರ, ಕಾಗವಾಡ, ಮಂಗಸೂಳಿ, ಮೋಳೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೇರವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬಂತು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಅವರು ಅಕ್ರಮ ಮಾರಾಟಗಾರರಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಲಾಯಿತು. ಅಷ್ಟೇ ಅಲ್ಲದೆ ಮಟ್ಕಾ ದಂಧೆ ಜೋರಾಗಿದ್ದು, ಮಾವಾ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಾಲೆ ಆಡುತ್ತಿದ್ದಾರೆ ಎಂದು ನೇರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಕೃಷ್ಣಾ ನದಿ ತೀರದ ನೆರೆ ಪೀಡಿತ ಗ್ರಾಮಗಳಾದ ಕುಸುನಾಳ, ಮುಳವಾಡ, ಕೃಷ್ಣಾ ಕಿತ್ತೂರು, ಬನಿಜವಾಡ ಗ್ರಾಮಗಳ ದಲಿತ ಕುಟುಂಬಗಳಿಗೆ ಯಾವುದೇ ಸಹಾಯ ಸಹಕಾರ ಸಿಗುತ್ತಿಲ್ಲ ಹಾಗೂ ಸುರಕ್ಷಿತ ಸ್ಥಳಕ್ಕೆ ಇಂದಿಗೂ ಸ್ಥಳಾಂತರಿಸಿಲ್ಲ. ನಮಗೆ ತಳ ನಿಶ್ಚಿತಗೊಳಿಸಿಲ್ಲ, ಇದನ್ನು ಶೀಘ್ರವಾಗಿ ಮಾಡಿಕೊಡಿ ಮತ್ತು ಸರ್ಕಾರದಿಂದ ಸಿಗುವ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಎಂದು ಒತ್ತಾಯಿಸಿದರು.

ಕಾಗವಾಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸವ ನಗರದಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಸುಮಾರು 2000 ಕುಟುಂಬಗಳಿಗೆ ಮನೆಗಳ ದಾಖಲೆ ಪತ್ರಗಳನ್ನು ನೀಡುತ್ತಿಲ್ಲದಿರುವುದು ಅನ್ಯಾಯವಾಗಿದೆ ಎಂದು ದೂರಿದರು. ಈ ಹಿಂದೆ ನಿವೇಶನ ನೀಡುವಾಗ ಕೊಟ್ಟ ಹಕ್ಕುಪತ್ರಗಳನ್ನೇ ಅಧಿಕೃತ ದಾಖಲೆ ಎಂದು ಪರಿಗಣಿಸಿ ಹಕ್ಕು ನೀಡಬೇಕೆಂದು ಪ್ರಮುಖರು ಬೇಡಿಕೆ ಮಂಡಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದಲಿತ ಮುಖಂಡರು ಪ್ರಶ್ನಿಸಿ, ಎಲ್ಲ ಶಾಲೆಗಳಲ್ಲಿ ಪ್ರತಿದಿನ ಸಂವಿಧಾನದ ಪೀಠಿಕೆ ಬೋಧಿಸುವುದು ಕಡ್ಡಾಯವಾಗಬೇಕು ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಕಡ್ಡಾಯವಾಗಬೇಕು ಎಂದರು. ದಲಿತ ವಸತಿ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಬೇಕು, ಕಾಗವಾಡ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ವಾಹನದ ವ್ಯವಸ್ಥೆ ಮಾಡಬೇಕು ಹಾಗೂ ಅಲ್ಲಿನ ಕೆಟ್ಟುಹೋಗಿರುವ ಯಂತ್ರಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಹಿಪ್ಪರಗಿ ಅಣೆಕಟ್ಟು ಯೋಜನೆ ಅಡಿಯಲ್ಲಿ ಜಮೀನು ಕಳೆದುಕೊಂಡ ಕುಟುಂಬಗಳಿಗೆ ಇದುವರೆಗೂ ಪರಿಹಾರ ಧನ ನೀಡಿಲ್ಲ, ಅದನ್ನು ತಕ್ಷಣ ನೀಡಬೇಕು ಎಂದು ಅನೇಕ ಬೇಡಿಕೆಗಳನ್ನು ಅಧಿಕಾರಿಗಳ ಮುಂದಿಟ್ಟು ಎಸ್‌ಸಿ ಹಾಗೂ ಎಸ್‌ಟಿ ಸಮಾಜಕ್ಕೆ ಸಹಕಾರ ನೀಡಲು ಕೇಳಿಕೊಂಡರು.

ಬೆಳಗಾವಿ ಜಿಲ್ಲಾ ದಲಿತ ಸಂಘಟನೆಯ ಸಂಚಾಲಕ ಸಂಜಯ್ ತಳವಲ್ಕರ್ ಮಾತನಾಡಿ, ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಸ್ಯೆಗಳನ್ನು ಆಲಿಸಬೇಕಿತ್ತು. ಆದರೆ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ, ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸದಾಶಿವ್ ಮಾಂಗ್ ಅವರು ಪ್ರಾರಂಭದಲ್ಲಿ ಸ್ವಾಗತಿಸಿ ಸಭೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಗ್ರೇಡ್-2 ತಹಶೀಲ್ದಾರ್ ಶ್ರೀಮತಿ ರಶ್ಮಿ ಜಕಾತೆ, ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈರಣ್ಣ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡುರಂಗ ಮದಬಾವಿ, ಸಿಪಿಐ ಪ್ರಶಾಂತ್ ಹಳ್ಳೂರ್, ಪಿಎಸ್‌ಐ ಕೆ. ಕೆ. ಕೋತ್, ತಾಲೂಕು ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಲೋಕೋಪಯೋಗಿ ಅಧಿಕಾರಿ ಎಂ. ಎಸ್. ಮಗದುಮ್, ಐನಾಪುರ ಪಟ್ಟಣ ಪಂಚಾಯಿತಿ ಅಧಿಕಾರಿ ಮಾಂತೇಶ್ ಕೊಲ್ಲಾಪುರ, ಕಾಗವಾಡ ಪಟ್ಟಣ ಪಂಚಾಯಿತಿ ಅಧಿಕಾರಿ ಪ್ರಸನ್ನ ಕಲ್ಯಾಣಶೆಟ್ಟಿ, ಶೇಡಬಾಳ ಪಟ್ಟಣ ಪಂಚಾಯಿತಿ ಅಧಿಕಾರಿ ಕೆ. ಕೆ. ಗಾವಡೆ, ಸರ್ವಾಧಿಕಾರಿ ಎ. ಜೆ. ಶೇಖ್, ಕೃಷಿ ಅಧಿಕಾರಿ ಕಾಂತಿನಾಥ್ ಬಿರಾದಾರ್ ಮುಂತಾದವರು ಚರ್ಚೆಯಲ್ಲಿ ಪಾಲ್ಗೊಂಡು ಉತ್ತರಿಸಿದರು.

ಜಿಲ್ಲಾ ದಲಿತ ಸಂಘಟನೆಯ ಸಂಚಾಲಕ ಸಂಜಯ್ ತಳವಳ್ಕರ್, ದಲಿತ ಮುಖಂಡರಾದ ವಿವೇಕ್ ಕಡಪೆ, ನ್ಯಾಯವಾದಿ ಪ್ರವೀಣ್ ಕೆಂಬವಾಡೆ, ನ್ಯಾಯವಾದಿ ಮನೋಜೆ, ಸಚಿನ್ ಸಿಂಗೆ, ವಿದ್ಯಾಧರ ತೊಂಡಾರೆ, ಪ್ರಕಾಶ್ ಧೊಂಡಾರೆ, ಅಶೋಕ್ ಕಾಂಬಳೆ, ಸದಾಶಿವ್ ಮಾಂಗ್, ಈಶ್ವರ್ ಕಾಂಬಳೆ, ವಿಜಯ ಆಸುದೆ, ಶೇಖರ್ ಕುರಾಡೆ ಸೇರಿದಂತೆ ಅನೇಕ ಗ್ರಾಮಗಳಿಂದ ಬಂದ ದಲಿತ ಮುಖಂಡರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಇರಿಸಿದರು.

Tags:

error: Content is protected !!