Dharwad

ಎಲ್ ಆ್ಯಂಡ್ ಟಿ ಕಚೇರಿಗೆ ಪಾಲಿಕೆ ಸದಸ್ಯರ ಮುತ್ತಿಗೆ: ಕುಡಿಯುವ ನೀರಿಗಾಗಿ ಪಕ್ಷಾತೀತವಾಗಿ ಬೀದಿಗಿಳಿದ ಜನಪ್ರತಿನಿಧಿಗಳು!

Share

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಇಂದು ಮಹಾನಗರ ಪಾಲಿಕೆಯ ಸದಸ್ಯರು ಎಲ್ ಅಂಡ್‌ ಟಿ ಕಂಪನಿಯ ಕಚೇರಿಗೆ ನುಗ್ಗಿ ಆಕ್ರೋಶ ಹೊರಹಾಕಿದರು. ಬೇಸಿಗೆಯ ಸುಡು ಬಿಸಿಲಿನಲ್ಲಿ ಜನರಿಗೆ ಸಮರ್ಪಕವಾಗಿ ನೀರು ಪೂರೈಸದ ಕಂಪನಿಯ ಬೇಜವಾಬ್ದಾರಿತನದ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪಕ್ಷಾತೀತವಾಗಿ ಸಿಡಿದೆದ್ದಿದ್ದಾರೆ.

ಧಾರವಾಡದಲ್ಲಿರುವ ಎಲ್ ಅಂಡ್‌ ಟಿ ಕಂಪನಿಯ ಕಚೇರಿಗೆ ಇಂದು ದಿಢೀರ್ ಮುತ್ತಿಗೆ ಹಾಕಿದ ಪಾಲಿಕೆ ಸದಸ್ಯರು, ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರದ ನೀರು ಪೂರೈಕೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಕಂಪನಿಯು, ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸದಸ್ಯರು ಕಿಡಿಕಾರಿದರು. “ಸದ್ಯ ಬೇಸಿಗೆ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಅವಶ್ಯಕತೆ ಹೆಚ್ಚಿದೆ. ಆದರೆ ವಾರಗಟ್ಟಲೆ ನೀರು ಬಾರದೆ ಜನರು ನಮಗೆ ಪ್ರಶ್ನೆ ಮಾಡುತ್ತಿದ್ದಾರೆ. ಜನರಿಗೆ ನಾವು ಉತ್ತರ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸದಸ್ಯರು ಅಳಲು ತೋಡಿಕೊಂಡರು.
ಕೂಡಲೇ ನೀರು ಪೂರೈಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಕಂಪನಿಯ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Tags:

error: Content is protected !!