ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಗಡಿ ಸಚಿವ ಎಚ್.ಕೆ. ಪಾಟೀಲ್ ಅವರ ಸೂಚನೆಯಂತೆ ಬೆಳಗಾವಿಯಲ್ಲಿ ಸುಮಾರು ಎರಡು ದಶಕಗಳ ನಂತರ ಗಡಿ ಕನ್ನಡಿಗರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವೆ ಐತಿಹಾಸಿಕ ಸಭೆ ನಡೆದಿದ್ದು, ಸುಮಾರು 24 ಪ್ರಮುಖ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಬೆಳಗಾವಿ ಜಿಲ್ಲಾಧಿಕಾರಿಗಳು ಈ ಸಮಸ್ಯೆಗಳನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಹಿತ ರಕ್ಷಣೆ ಹಾಗೂ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ಗಡಿ ಸಚಿವರಾದ ಎಚ್.ಕೆ. ಪಾಟೀಲ್ ಅವರ ಸೂಚನೆಯಂತೆ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರೊಂದಿಗೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಸುಮಾರು 23 ವರ್ಷಗಳ ಬಳಿಕ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕ ವಿಕ್ರಮ್ ಸಾವಂತ್, ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ಸೇರಿದಂತೆ ಮಹಾರಾಷ್ಟ್ರ ಗಡಿಭಾಗದ ಕನ್ನಡಿಗರು ಭಾಗಿಯಾಗಿ ಸುಮಾರು 24 ಅಂಶಗಳ ಕುರಿತು ಸುದೀರ್ಘ ಸಭೆಯನ್ನು ನಡೆಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು, ಸುಮಾರು ತಿಂಗಳ ಹಿಂದೆ ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರಿಗಾಗಿ ಒಂದು ಸಭೆಯನ್ನು ಕರೆಯಲಾಗಿತ್ತು. ಅದರಂತೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರ ಸಮಸ್ಯೆಗಳನ್ನು ಅರಿಯಲು ಈ ಸಭೆಯನ್ನು ಆಯೋಜಿಸಲಾಗಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಸರ್ಕಾರದಿಂದ ಒದಗಿಸಬಹುದಾದ ಹೆಚ್ಚಿನ ಸವಲತ್ತುಗಳು ಮತ್ತು ಕರ್ನಾಟಕದಲ್ಲಿರುವ ಮರಾಠಿ ಮಾಧ್ಯಮ ಶಾಲೆಗಳಿಗೆ ಕರ್ನಾಟಕ ಸರ್ಕಾರ ನೀಡುವ ಕುರಿತು ಚರ್ಚೆ ನಡೆದಿದೆ. ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಯೋಜನೆಗಳನ್ನು ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತಲುಪಿಸಲು ಚರ್ಚಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸೇರಿದಂತೆ ಸುಮಾರು 24 ವಿಷಯಗಳ ಕುರಿತು ಸುದೀರ್ಘ ಚರ್ಚೆಯನ್ನು ನಡೆಸಲಾಗಿದೆ. ಗಡಿಭಾಗದಲ್ಲಿ ಸದಾ ಶಾಂತಿ ಮತ್ತು ಸೌಹಾರ್ದತೆಯಿರಬೇಕು. ಇದರಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ. 24 ವರ್ಷಗಳ ಬಳಿಕ ಈ ಸಭೆಯನ್ನು ಕರೆಯಲಾಗಿದೆ ಎಂದರು.
ಅಲ್ಲದೇ, ಮತ್ತೇ 2-3 ಸುತ್ತಿನ ಸಭೆ ನಡೆಸಿ, ಸೂಕ್ಷ್ಮತೆಗಳನ್ನು ಅರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು. ಬಸ್ಸಿನ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ನೀರಿನ ಸಮಸ್ಯೆ, ಸೇರಿದಂತೆ ಇನ್ನುಳಿದ ಸಮಸ್ಯೆಗಳನ್ನು ನಮ್ಮ ಮಟ್ಟದಲ್ಲಿ ಪರಿಹರಿಸಲು ಪ್ರಯತ್ನಿಸಲಾಗುವುದು. ನಮ್ಮ ಹಂತದಲ್ಲಿ ಸಾಧ್ಯವಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಅದರಂತೆ ಜತ್ ತಾಲೂಕಿನ ಕೆಲ ಹಳ್ಳಿಗಳು ನೀರಿನ ಸಮಸ್ಯೆಗೆ ಸೋತು ಕರ್ನಾಟಕಕ್ಕೆ ಸೇರುವ ಠರಾವನ್ನು ಪಂಚಾಯಿತಿಯಲ್ಲಿ ಪಾಸು ಮಾಡಿವೆ. ಈ ಕುರಿತು ಅರ್ಜಿಗಳು ಬಂದಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಇನ್ನು ಮಹಾರಾಷ್ಟ್ರದ ಮಾಜಿ ಶಾಸಕರಾದ ವಿಕ್ರಮ್ ಸಾವಂತ್ ಅವರು ಈಗಾಗಲೇ ಗಡಿಭಾಗದ ಸಮಸ್ಯೆಗಳ ಕುರಿತು ಸಚಿವರಾದ ಎಚ್.ಕೆ. ಪಾಟೀಲ್ ಮತ್ತು ಎಂ.ಬಿ. ಪಾಟೀಲರನ್ನು ಭೇಟಿಯಾಗಿ ಗಮನ ಸೆಳೆಯಲಾಗಿತ್ತು. ನಮ್ಮ ಕ್ಷೇತ್ರದಲ್ಲಿ ಶೇ.. 65 ರಷ್ಟು ಕನ್ನಡಿಗರಿದ್ದು, ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಪ್ರಯತ್ನವಿದೆ. ಪ್ರಥಮವಾಗಿ ಶಿಕ್ಷಣ, ರಸ್ತೆ, ನೀರು, ಬಸ್, ಮೂಲಸೌಲಭ್ಯಗಳ ಕುರಿತು ಮಹತ್ವದ ಚರ್ಚೆಯಾಗಿದೆ. ಕರ್ನಾಟಕದ 865 ಹಳ್ಳಿಗಳಿಗೆ ಮಹಾರಾಷ್ಟ್ರದಿಂದ ವಿವಿಧ ಯೋಜನೆಗಳು ದೊರೆಯುತ್ತವೆಯೋ ಅದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿರುವ 747 ಹಳ್ಳಿಗಳ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು. ಮಹಾರಾಷ್ಟ್ರ ಮತ್ತು ಕರ್ನಾಟಕದ ಜನರು ಮಾನವೀಯತೆಯ ದೃಷ್ಠಿಯಿಂದ ನೀರಿನ ನಿರ್ವಹಣೆಯಾಗಬೇಕು. ಜತ್, ಅಕ್ಕಲಕೋಟ್, ಸೋಲ್ಲಾಪುರಗಳಲ್ಲಿ ನೀರಿನ ಸಮಸ್ಯೆಯಿದ್ದು, ಮಳೆಗಾಲದಲ್ಲಿ ಕರ್ನಾಟಕದ ತುಬಚಿ-ಬಬಲೇಶ್ವರದಿಂದ ನೀರು ನೀಡಿ ಮತ್ತು ಬೇಸಿಗೆಯಲ್ಲಿ ತೆಗೆದುಕೊಳ್ಳುವ ನೀತಿಯನ್ನು ಅನುಸರಿಸಬೇಕಾಗಿದೆ. ಗಡಿಯಲ್ಲಿ ಶಿಕ್ಷಣ ಪಡೆದವರಿಗೆ ಶೇ. 5 ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ನೀಡಬೇಕು ಎಂದರು.
ಇನ್ನು ತಾವು ಎರಡು ರಾಜ್ಯಗಳ ಸೌಹಾರ್ದತೆ ಕಾಪಾಡಾಲು ಬಂದಿರುವಾಗ ಬೆಳಗಾವಿಯಲ್ಲಿ ಕೆಲ ಸಂಘಟನೆಗಳು ಗಡಿ ವಿವಾದಕ್ಕಾಗಿ ಹೋರಾಡುತ್ತಿವೆ ಎಂಬ ಪ್ರಶ್ನೆಗೆ ಮಾತೃಭಾಷೆಯ ಪ್ರೇಮ ಎಲ್ಲರಿಗೂ ಇರುವುದು ಸಹಜ ಆದರೇ, ಅದಕ್ಕಿಂತ ಮೊದಲೂ ಬರುವುದು ಮಾನವೀಯತೆ. ಮಾನವೀಯ ಮೌಲ್ಯಗಳನ್ನು ಆಧರಿಸಿ ಅರಿತು ಬೆರೆತು ಬಾಳಬೇಕೆಂದರು.
ಈ ವೇಳೆ ಮಹಾರಾಷ್ಟ್ರದ ಕನ್ನಡಿಗರು, ಬೆಳಗಾವಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ಧರು.
