BELAGAVI

ರಂಗಭೂಮಿಯಿಂದ ಮಾತ್ರ ನವರಸಗಳ ದರ್ಶನ ಸಾಧ್ಯ: ರಂಗಕರ್ಮಿ ರವಿ ಕೋಟಾರಗಸ್ತಿ

Share

ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ. ಇಡೀ ಜಗತ್ತಿನ ನವರಸಗಳನ್ನು ಒಂದೇ ವೇದಿಕೆಯಲ್ಲಿ ಕಾಣಬೇಕೆಂದರೆ ಅದು ರಂಗಭೂಮಿಯಿಂದ ಮಾತ್ರ ಸಾಧ್ಯ” ಎಂದು ವಿಶ್ರಾಂತ ಉಪ ಆಯುಕ್ತ ಹಾಗೂ ರಂಗಕರ್ಮಿ ರವಿ ಕೋಟಾರಗಸ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿಯ ಮಹಾಂತೇಶ ನಗರದ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಹಾಗೂ ಮಹಾಂತೇಶ ನಗರ ರಹವಾಸಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಿರಿಯ ಸಾಹಿತಿ ಹಾಗೂ ನಾಟಕಕಾರರಾದ ಯ. ರು. ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್. ಆಂಜನೇಯ ಅವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದರು. ರಂಗಕರ್ಮಿಗಳು ಹಾಗೂ ವಿಶ್ರಾಂತ ಉಪ ಆಯುಕ್ತರಾದ ರವಿ ಕೋಟಾರಗಸ್ತಿ ಮತ್ತು ಪ್ರಾಚಾರ್ಯರಾದ ನಿರ್ಮಲಾ ಬಟ್ಟಲ, ಆರ್.ಪಿ.ಡಿ ಕಾಲೇಜಿನ ಕನ್ನಡ ವಿಭಾಗದ ಪ್ರಮುಖರಾದ ಎಚ್.ಬಿ. ಕೋಲಕಾರ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ರಂಗಕರ್ಮಿಗಳು ಹಾಗೂ ವಿಶ್ರಾಂತ ಉಪ ಆಯುಕ್ತರಾದ ರವಿ ಕೋಟಾರಗಸ್ತಿ ಅವರು,
ಇಂಟರನ್ಯಾಷನಲ್ ಥಿಯೇಟರ್ ಇನ್ಸಟಿಟ್ಯೂಟ್ 1948 ರಿಂದ ವಿಶ್ವ ರಂಗಭೂಮಿ ದಿನಾಚರಣೆಯನ್ನು ಮಾಡುತ್ತಿದೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ರಂಗಭೂಮಿಯೂ ಸಾವಿರಾರು ವರ್ಷಗಳಿಂದ ಮಾಡುತ್ತಿದೆ. ಅಭಿನಯವನ್ನು ಸಮಾಜದ ಒಳಿತಿಗಾಗಿ, ಸಮಾಜದ ಬಾಂಧವ್ಯಕ್ಕಾಗಿ ಬಳಸಬೇಕು. ನವರಸಗಳು ಒಂದೇ ಭೂಮಿಯಲ್ಲಿ ಕಾಣಲು ಸಿಗುವುದು ರಂಗಭೂಮಿಯಲ್ಲಿ ಮಾತ್ರ ಎಂದರು.

ರಂಗ ಸಂದೇಶ ನೀಡಿದ ಬಾಬಾಸಾಹೇಬ್ ಕಾಂಬಳೆ ಅವರು, ಕರ್ನಾಟಕ ಸರ್ಕಾರವು ಶಾಲಾ ಮತ್ತು ಕಾಲೇಜುಗಳಲ್ಲಿ ರಂಗಭೂಮಿಯ ಮೂಲಕ ಶಿಕ್ಷಣವನ್ನು ನೀಡಲೂ ಹಲವಾರು ಆಯಾಮಗಳಿಂದ ಪ್ರಯತ್ನಿಸುತ್ತಿದೆ. ಈಗಾಗಲೇ ರಂಗಭೂಮಿ ಶಿಕ್ಷಕರನ್ನು ನೇಮಿಸಲು ಸರ್ಕಾರವನ್ನು ಒತ್ತಾಯಿಸಲಾಗಿದೆ. ಮನುಷ್ಯ ತನ್ನ ತಾನು ಅರಿಯುವವರೆಗೂ ಸಾಕಾರವಾಗುವುದಿಲ್ಲ. ಯುದ್ಧಗಳು ನಿಲ್ಲಬೇಕು. ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂಬುದು ರಂಗಭೂಮಿಯ ಮೂಲ ಉದ್ಧೇಶ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಶಕ್ತಿ ರಂಗಭೂಮಿ ಮತ್ತು ಸಂಗೀತಕ್ಕಿದೆ. ಕಲಾ ಮಾಧ್ಯಮದಿಂದ ಕ್ರಾಂತಿಯನ್ನು ನಿರ್ಮಿಸಿ ಜಗತ್ತನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಬಿ.ಕೆ. ಕಾಡೇಶಕುಮಾರ್, ಶಂಕರ ಅರಕೇರಿ, ಸುಜಾತಾ ಮಗದುಮ್ಮ, ಅನೀಲ ಮೇತ್ರಿ, ಶಶಿಕಾಂತ ಜಂಗ್ಲಿ, ಡಾ.ಕೆ.ವ್ಹಿ. ನಾಗರಾಜ್ ಮೂರ್ತಿ, ಬಿ. ನೀಲಮ್ಮ, ಬಸವರಾಜ್ ತಳವಾರ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!