Belagavi

ಕೋರ್ಟ್ ಫೀ ಇಲ್ಲದೆ ಸಾಲ ವಸೂಲಿ: ಕೆನರಾ ಬ್ಯಾಂಕ್ ಪ್ರಬಂಧಕರಿಗೆ ಕಾನೂನು ಅರಿವು

Share

ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕೆನರಾ ಬ್ಯಾಂಕ್ ಅಧಿಕಾರಿಗಳಿಗಾಗಿ ಆಯೋಜಿಸಿದ್ದ ವಿಶೇಷ ಕಾನೂನು ಅರಿವು ಕಾರ್ಯಕ್ರಮದಲ್ಲಿ, ಕೋರ್ಟ್ ಶುಲ್ಕವಿಲ್ಲದೆ ಬಾಕಿ ಹಣ ವಸೂಲಿ ಮಾಡುವ ‘ಖಾಯಂ ಜನತಾ ನ್ಯಾಯಾಲಯ’ದ ಮಹತ್ವದ ಕುರಿತು ಜಿಲ್ಲಾ ನ್ಯಾಯಾಧೀಶರು ಆಶಾದಾಯಕ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಳಗಾವಿಯ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಲಾಯನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಹಾಗೂ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಜಡಿಯಪ್ಪ ಪಲ್ಲೇದ ಅವರು, ರಾಷ್ಟ್ರೀಕೃತ ಬ್ಯಾಂಕುಗಳು ಸಾವಿರಾರು ರೂಪಾಯಿಗಳ ಕೋರ್ಟ್ ಶುಲ್ಕ ಪಾವತಿಸುವ ಬದಲು ಈ ನ್ಯಾಯಾಲಯದ ಸದುಪಯೋಗ ಪಡೆಯಬೇಕು ಎಂದರು. ಎಸ್‌ಬಿಐ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳು ಈಗಾಗಲೇ ಕೋಟ್ಯಂತರ ರೂಪಾಯಿಗಳ ಕೋರ್ಟ್ ಫೀ ಉಳಿಸಿ, ಈ ವೇದಿಕೆಯ ಮೂಲಕ ಯಶಸ್ವಿಯಾಗಿ ಬಾಕಿ ವಸೂಲಾತಿ ಆದೇಶ ಪಡೆದಿರುವುದನ್ನು ಅವರು ಉದಾಹರಿಸಿದರು.

ಬ್ಯಾಂಕಿನ ಸಂಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ ಪೈ ಅವರ “ವೈಯಕ್ತಿಕ ಸ್ಪರ್ಶ ಮತ್ತು ವಿನಮ್ರ ನಡೆ”ಯ ತತ್ವಗಳನ್ನು ನೆನಪಿಸಿದ ನ್ಯಾಯಾಧೀಶರು, ಪ್ರಸ್ತುತ ಹೈಕೋರ್ಟ್‌ನಿಂದ ಕಾರ್ಯನಿರತ ನ್ಯಾಯಾಧೀಶರೇ ಇಲ್ಲಿ ನೇಮಕಗೊಂಡಿರುವುದರಿಂದ ತೀರ್ಪುಗಳಿಗೆ ಹೆಚ್ಚಿನ ಕಾನೂನು ಮಾನ್ಯತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ ಪಾಟೀಲ, ಎಜಿಎಂ ಶ್ರೀವಿದ್ಯಾ, ಅಲಾಯನ್ಸ್ ಗವರ್ನರ್ ದಿನಕರ ಶೆಟ್ಟಿ ಹಾಗೂ 50ಕ್ಕೂ ಹೆಚ್ಚು ಶಾಖಾ ವ್ಯವಸ್ಥಾಪಕರು ಪಾಲ್ಗೊಂಡಿದ್ದರು. ಹಿರಿಯ ವಕೀಲರಾದ ಎಸ್.ಬಿ. ಶೇಖ್ ಮತ್ತು ರೂಪಾ ಪಾಟೀಲ ಅವರು ಸಾಲ ವಸೂಲಾತಿ ಪ್ರಕ್ರಿಯೆಯ ಕಾನೂನು ಅಂಶಗಳ ಬಗ್ಗೆ ಉಪನ್ಯಾಸ ನೀಡಿದರು.

Tags:

error: Content is protected !!