BELAGAVI

ವಿಧಾನಸಭೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಕಿಚ್ಚು: ಬೆಳಗಾವಿ ದಕ್ಷಿಣದಿಂದ ಉತ್ತರಕ್ಕೆ ಶಿಫ್ಟ್ ಮಾಡಿದ್ದಕ್ಕೆ ಅಭಯ್ ಪಾಟೀಲ್ ಆಕ್ರೋಶ

Share

ಬೆಳಗಾವಿಯ ವಡಗಾಂವನಲ್ಲಿ ನಿರ್ಮಾಣವಾಗಬೇಕಿದ್ದ ಕ್ಯಾನ್ಸರ್ ಆಸ್ಪತ್ರೆಯನ್ನು ಬಿಮ್ಸ್ ಆವರಣಕ್ಕೆ ಸ್ಥಳಾಂತರಿಸುತ್ತಿರುವ ಸರ್ಕಾರದ ಕ್ರಮ ಇಂದು ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಶಾಸಕ ಅಭಯ್ ಪಾಟೀಲ್ ಅವರು ಸರ್ಕಾರದ ವಿರುದ್ಧ ತಾರತಮ್ಯದ ಆರೋಪ ಮಾಡಿದರೆ, ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಜನಹಿತದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಇಂದು ವಿಧಾನಸಭೆಯ ಅಧಿವೇಶನದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಚುಕ್ಕೆ ಗುರುತಿನ ಪ್ರಶ್ನೆಯನ್ನು ಕೇಳಿದರು. ಬಸವರಾಜ್ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬೆಳಗಾವಿಯ ವಡಗಾಂವನಲ್ಲಿ ಈ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕೆಂದು ಆಗ್ರಹಿಸಿದಾಗ ಅವರು ಘೋಷಣೆಯನ್ನು ಮಾಡಿದ್ದರು. ವೈದ್ಯಕೀಯ ಶಿಕ್ಷಣ ಸಚಿವರು ಆದಿಯಾಗಿ ಇನ್ನುಳಿದ ಅಧಿಕಾರಿಗಳು ಸರ್ವೆಯನ್ನು ನಡೆಸಿ 400 ಎಕರೆ ಪ್ರದೇಶದಲ್ಲಿ ನಿರ್ಮಿಸುವುದಾಗಿ ಘೋಷಣೆಯನ್ನು ಸಹ ಮಾಡಿದ್ದರು. ಆದರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಯನ್ನು ದಕ್ಷಿಣದಿಂದ ಉತ್ತರಕ್ಕೆ ಸ್ಥಳಾಂತರಿಸಲು ಕಾರಣವೇನು? ದಕ್ಷಿಣದಲ್ಲಿ 400 ಎಕರೆ ಬೇಕು. ಉತ್ತರದಲ್ಲಿ ಕೇವಲ 1.4 ಎಕರೆಯಲ್ಲಿ ಮುಂದಾಗಿದೆ. ಸರ್ಕಾರ ಇಂತಹ ತಾರತಮ್ಯ ಯಾಕೆ ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಶರಣ್’ಪ್ರಕಾಶ್ ಪಾಟೀಲ್ ಅವರು, ಕೇವಲ 50 ಕೋಟಿ ಅನುದಾನ ನೀಡಿದ ಮಾತ್ರಕ್ಕೆ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುವುದು ಸಾಧ್ಯವಿಲ್ಲ. ಅದಕ್ಕೆ ಇನ್ನುಳಿದ ಇಲಾಖೆಗಳ ಸಹಯೋಗವು ಅತ್ಯಂತ ಮಹತ್ತರವಾಗಿದೆ. ಹುಬ್ಬಳ್ಳಿ-ಧಾರವಾಡನವರು ಪ್ರಸ್ತಾವಣೆ ಸಲ್ಲಿಸಿದ್ದರು. ಆದರೇ, ನಾವು ಬೆಳಗಾವಿ ಬಿಟ್ಟು ನೀಡಿಲ್ಲ. ಬಿಮ್ಸ್ ಆಸ್ಪತ್ರೆಗೆ ಆವರಣದಲ್ಲೇ ಇರುವ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಿದರೇ, ಜನರಿಗೆ ಅನುಕೂಲವಾಗುತ್ತದೆ ಎಂಬ ನಿಟ್ಟಿನಲ್ಲಿ ಇದನ್ನು ಕ್ರಮಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಶಾಸಕ ಅಭಯ್ ಪಾಟೀಲ್ ಅವರು ನಿಮ್ಮ ಅಧಿಕಾರಿಗಳೇ ಸರ್ವೇ ನಡೆಸಿ ಪರಿಶೀಲಿಸಿ ವರದಿ ಕೊಟ್ಟಿದ್ದನ್ನ ಈಗ ಯಾಕೆ ಅಲ್ಲಗಳೆಯುತ್ತಿದ್ದೀರಿ. ತುಮಕೂರಿನಲ್ಲಿ ಈ ನಿಯಮ ಅನ್ವಯಿಸಿಲ್ಲ ಎಂದರು. ಇದಕ್ಕೆ ಸಚಿವರು ತುಮಕೂರಿನಲ್ಲಿಯೂ ಜಿಲ್ಲಾಸ್ಪತ್ರೆಯ ಆವರಣದಲ್ಲೇ ಇದೇ ಎಂದರು. ಈ ವೇಳೆ ಸದಸ್ಯ ಅರವಿಂದ ಬೆಲ್ಲದ ಅವರು ಬೆಂಗಳೂರಿನಲ್ಲಿ ಬೇರೆ ಬೇರೆಡೆ ವಿವಿಧ ವಿಭಾಗಗಳಿವೆ. ಆದರೇ, ಬೆಳಗಾವಿಯ ಮೇಲೆ ಯಾಕೇ ಈ ಅನ್ಯಾಯ ಎಂದು ಧ್ವನಿಗೂಡಿಸಿದರು. ಇದಕ್ಕೆ ಸಚಿವರು ಸದಸ್ಯ ಅರವಿಂದ ಬೆಲ್ಲದ ನೀವು ಇದನ್ನ ಹುಬ್ಬಳ್ಳಿ-ಧಾರವಾಡಕ್ಕೆ ತೆಗೆದುಕೊಂಡು ಹೊರಟಿದ್ದೀರಿ. ನಾವೇ ಅದನ್ನ ಬೆಳಗಾವಿಯಲ್ಲಿ ಉಳಿಸಿದ್ದೇವೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ ಎಂದರು.

Tags:

error: Content is protected !!