ಕೌಟುಂಬಿಕ ಕಲಹದ ಹಿನ್ನೆಲೆ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಅವರ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡಲ್ಲಿ ನಡೆದಿದೆ.
ಧಾರವಾಡ ಜಯನಗರ 4ನೇ ಕ್ರಾಸ್ನಲ್ಲಿ ಸವಿತಾ ಹೊಂಗಲಮಠ ಎಂಬುವವರೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಪತಿಯ ಮನೆಯಲ್ಲೇ ಸವಿತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆದರೆ ಇದು ಆತ್ಮಹತ್ಯೆ ಅಲ್ಲ ಇದು ಕೊಲೆ ಎಂದು ಗೃಹಿಣಿಯ ತವರು ಮನೆಯವರು ಆರೋಪ ಮಾಡುತ್ತಿದ್ದಾರೆ. ಸವಿತಾಳಿಗೆ ಗಂಡನ ಮನೆಯವರು ಸಾಕಷ್ಟು ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಅಳಿಯನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಸವಿತಾ ತವರು ಮನೆಯವರು ಆರೋಪ ಮಾಡಿದ್ದಾರೆ. ಈ ಹಿಂದೆ ತಮ್ಮ ಮಗಳಿಗೆ ನಿದ್ರೆ ಮಾತ್ರೆ ಕೊಟ್ಟು ಕೊಲೆ ಮಾಡಲು ಯತ್ನ ಮಾಡಲಾಗಿತ್ತು. ಈ ಬಾರಿ ನೇಣು ಬಿಗಿದು ಆಕೆಯನ್ನು ಕೊಲೆ ಮಾಡಲಾಗಿದೆ. ಕಳೆದ 25 ವರ್ಷದ ಹಿಂದೆಯೇ ಬಸವರಾಜ ಎಂಬಾತನಿಗೆ ನಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿದ್ದೆವು. ಆಗಿನಿಂದಲೂ ಆಕೆಗೆ ಕಿರುಕುಳ ಇತ್ತು ಎಂದು ಸವಿತಾ ಮನೆಯವರು ಆರೋಪ ಮಾಡಿದ್ದಾರೆ. ಬಸವರಾಜ ಹೊಂಗಲಮಠ ಸೇರಿದಂತೆ ಅವರ ಮನೆಯ ಮೂವರು ಸದಸ್ಯರ ಮೇಲೆ ಸವಿತಾ ತವರು ಮನೆಯವರು ಕೊಲೆ ಆರೋಪ ಮಾಡಿದ್ದಾರೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
