Bagalkot

ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್: ಬೆಳಗಾವಿ ‘ತ್ರಿಮೂರ್ತಿ’ಗಳಿಗೆ ಬಿಗ್ ಟಾಸ್ಕ್!

Share

ರಾಜ್ಯದಲ್ಲಿ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಾಗಲಕೋಟೆ ಮತ್ತು ದಾವಣಗೆರೆ ಮತಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಈಗ ಬೆಳಗಾವಿಯ ಮೂವರು ಪ್ರಭಾವಿ ನಾಯಕರನ್ನು ಅಖಾಡಕ್ಕಿಳಿಸಿದೆ. ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಗೆಲುವಿನ ಹೊಣೆಗಾರಿಕೆ ವಹಿಸಲಾಗಿದೆ.

ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಗಳಲ್ಲಿ ಜಯಭೇರಿ ಬಾರಿಸಲು ಕಾಂಗ್ರೆಸ್ ತನ್ನ ರಣತಂತ್ರವನ್ನು ಚುರುಕುಗೊಳಿಸಿದ್ದು, ಬೆಳಗಾವಿ ಜಿಲ್ಲೆಯ ಸಂಘಟನಾ ಚತುರರಿಗೆ ವಿಶೇಷ ಜವಾಬ್ದಾರಿ ನೀಡಿದೆ. ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬಾಗಲಕೋಟೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದ್ದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ದಾವಣಗೆರೆ ಕ್ಷೇತ್ರದ ಹೊಣೆಗಾರಿಕೆ ವಹಿಸಲಾಗಿದೆ. ಅಹಿಂದ ಮತಗಳ ಸಂಘಟನೆಯಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತದಾರರ ಮೇಲೆ ಪ್ರಭಾವ ಹೊಂದಿರುವ ಲಕ್ಷ್ಮೀ ಹೆಬ್ಬಾಳಕರ್ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪಕ್ಷ ಮುಂದಾಗಿದೆ. ಜಿದ್ದಾಜಿದ್ದಿನ ಚುನಾವಣೆಗಳನ್ನು ಎದುರಿಸಿದ ದೀರ್ಘ ಅನುಭವ ಹೊಂದಿರುವ ಈ ಇಬ್ಬರು ನಾಯಕರು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಂಘಟನೆಗೆ ಇಳಿದಿದ್ದಾರೆ.

ಇನ್ನು ಲಿಂಗಾಯತ ಮತಗಳ ಕ್ರೋಢೀಕರಣ ಮತ್ತು ಸ್ಟಾರ್ ಪ್ರಚಾರಕರಾಗಿ ಅಖಾಡಕ್ಕಿಳಿಯಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಹೈಕಮಾಂಡ್ ವಿಶೇಷ ಟಾಸ್ಕ್ ನೀಡಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿರುವ ಸವದಿ ಅವರು ಉಭಯ ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಪರವಾಗಿ ಮತ ಬೇಟೆಯಾಡಲಿದ್ದಾರೆ. ಜಾತಿ ಲೆಕ್ಕಾಚಾರ ಮತ್ತು ಬೂತ್ ಮಟ್ಟದ ಸಂಘಟನೆಯ ಮೂಲಕ ವಿರೋಧ ಪಕ್ಷಗಳಿಗೆ ಸೆಡ್ಡು ಹೊಡೆಯಲು ಬೆಳಗಾವಿಯ ಈ ಮೂವರು ಘಟಾನುಘಟಿ ನಾಯಕರು ಸಜ್ಜಾಗಿದ್ದು, ಈ ಉಪ ಚುನಾವಣೆ ಈಗ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

Tags:

error: Content is protected !!