ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಇಂದು ಭಕ್ತಿ ಸಂಭ್ರಮ ಮನೆ ಮಾಡಿತ್ತು. ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಹಾಗೂ ಸಂಸದೆ ಪ್ರಿಯಾಂಕಾ ಜಾರಕೀಹೊಳಿ ಅವರ ಮಾರ್ಗದರ್ಶನದಲ್ಲಿ ಹರಿಭಕ್ತ ಪಾರಾಯಣದ ಮಹಾಪ್ರಸಾದ ಪೂಜೆ ಮತ್ತು ವಾರಕರಿಗಳ ಸತ್ಕಾರ ಸಮಾರಂಭ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.


ಬೆಳಗಾವಿ ತಾಲೂಕಿನ ಕಡೋಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಆಗಸಗಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹರಿಭಕ್ತ ಪಾರಾಯಣ ಕಾರ್ಯಕ್ರಮದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಕೆಯಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಸತೀಶ್ ಅಣ್ಣಾ ಜಾರಕೀಹೊಳಿ, ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕೀಹೊಳಿ ಹಾಗೂ ಯುವ ನಾಯಕ ಶ್ರೀ ರಾಹುಲ್ ಜಾರಕೀಹೊಳಿ ಅವರ ನೇತೃತ್ವದಲ್ಲಿ, ಅವರ ಆಪ್ತ ಸಹಾಯಕರು ಹಾಗೂ ಕೆಪಿಸಿಸಿ ಸದಸ್ಯರಾದ ಮಲಗೌಡಾ ಪಾಟೀಲ ಅವರು ಮಹಾಪ್ರಸಾದದ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಆಧ್ಯಾತ್ಮಿಕ ಚಿಂತನೆ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ಈ ಕಾರ್ಯಕ್ರಮವು ಗ್ರಾಮಸ್ಥರ ಗಮನ ಸೆಳೆಯಿತು.


ಇದೇ ಸಂದರ್ಭದಲ್ಲಿ ಪಾರಾಯಣ ಮಂಡಳಿಯ ವಾರಕರಿಗಳನ್ನು ಭಕ್ತಿಯಿಂದ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಆಗಸಗಿ ಗ್ರಾಮದ ನೂರಾರು ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಜಾರಕೀಹೊಳಿ ಕುಟುಂಬದ ಈ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹರಿನಾಮ ಸಂಕೀರ್ತನೆಯೊಂದಿಗೆ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.


