ದಕ್ಷಿಣಕಾಶಿ ಎಂದೇ ಪ್ರಸಿದ್ಧವಾದ ಬೆಳಗಾವಿಯ ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನದ ವತಿಯಿಂದ ಚೈತ್ರ ಪೌರ್ಣಿಮೆ ನಿಮಿತ್ತ ಕೊಲ್ಲಾಪುರಕ್ಕೆ ತೆರಳುವ ಸಾಸನಕಾಠಿ ಪಾದಯಾತ್ರಿಗಳಿಗೆ ಮತ್ತು ಎತ್ತುಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತಿ ಮತ್ತು ಸೇವೆಯ ಸಂಗಮವಾಗಿರುವ ಈ ಪಾದಯಾತ್ರೆಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಅದ್ಧೂರಿ ಚಾಲನೆ ನೀಡಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಚೈತ್ರ ಪೌರ್ಣಮಿಯ ಅಂಗವಾಗಿ ಬೆಳಗಾವಿಯ ಚವಾಟ ಗಲ್ಲಿಯ ದೇವದಾದಾ ಸಾಸನಕಾಠಿ, ನಾರ್ವೇಕರ್ ಗಲ್ಲಿಯ ಜ್ಯೋತಿರ್ಲಿಂಗ ದೇವಸ್ಥಾನ ಹಾಗೂ ಕೊಂಡುಸ್ಕೋಪ್ ಗ್ರಾಮದ ಸಾಸನಕಾಠಿಗಳು ಎತ್ತಿನ ಗಾಡಿಗಳೊಂದಿಗೆ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಪಾದಯಾತ್ರೆ ಬೆಳೆಸಿವೆ. ಈ ಸುದೀರ್ಘ ಪಯಣದಲ್ಲಿ ಎತ್ತುಗಳ ಆರೋಗ್ಯ ಕಾಪಾಡಲು ಶ್ರೀ ಕ್ಷೇತ್ರ ಕಪಿಲೇಶ್ವರ ದೇವಸ್ಥಾನದ ವತಿಯಿಂದ ಪೌಷ್ಟಿಕ ಆಹಾರವನ್ನು ನೀಡಲಾಗಿದ್ದು, ಪಾದಯಾತ್ರೆ ಮಾಡುವ ಭಕ್ತರಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.
ಪಾದಯಾತ್ರೆಯ ಮೊದಲ ತಂಗುದಾಣದಲ್ಲಿ ಶ್ರೀ ಕಪಿಲೇಶ್ವರ ದೇವಸ್ಥಾನದ ಟ್ರಸ್ಟ್ ವತಿಯಿಂದ ಭಕ್ತರಿಗಾಗಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳು ಮುಕ್ಕಾಂ ಸ್ಥಳಕ್ಕೆ ಭೇಟಿ ನೀಡಿ ಸಾಸನಕಾಠಿಗಳಿಗೆ ವಿಧಿವಿಧಾನಗಳಂತೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ರಾಹುಲ್ ಕುರಣೆ, ಅಭಿಜಿತ್ ಚೌಹಾಣ್, ಅಜಿತ್ ಜಾಧವ್, ಪ್ರಸಾದ್ ಬಾಚುಲ್ಕರ್, ರಾಜು ಭಾತಕಾಂಡೆ, ತಾನಾಜಿ ಮುತ್ಕೇಕರ್ ಸೇರಿದಂತೆ ಅಭಯ್ ಲಗಾಡೆ, ಜ್ಯೋತಿಬಾ ಕಾವಳೆ ಹಾಗೂ ಇನ್ನಿತರ ಟ್ರಸ್ಟಿಗಳು ಮತ್ತು ಮಹಿಳಾ ಸೇವಕರು ಉಪಸ್ಥಿತರಿದ್ದರು.
