ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗವಾಡ ಗ್ರಾಮದ ಬಳಿ ನಡೆದಿದೆ.
ಧಾರವಾಡದ ಆಶ್ಪಾಕ್ ಪಠಾಣ್ ಹಾಗೂ ಸೈಬಾಜ್ ಜಮಾದಾರ್ ಎಂಬುವವರು ಈ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಆಶ್ಪಾಕ್ ಹಾಗೂ ಸೈಬಾಜ್ ಅವರು ತಮ್ಮ ಸ್ನೇಹಿತರ ಜೊತೆಗೂಡಿ ಚಿಕ್ಕಮಲ್ಲಿಗವಾಡದ ಬಳಿ ಇರುವ ರೆಸಾರ್ಟ್‌ಗೆ ಸ್ವಿಮ್ಮಿಂಗ್ ಮಾಡಲು ಹೋಗಿದ್ದರು. ಮೊದಲು ಅಲ್ಲಿ ಈ ಎರಡು ಗುಂಪುಗಳ ಮಧ್ಯೆ ಜಗಳ ನಡೆದಿತ್ತು. ಸ್ಥಳೀಯರು ಈ ಜಗಳ ಬಿಡಿಸಿ ಕಳುಹಿಸಿದ್ದರು. ಆಶ್ಪಾಕ್ ಹಾಗೂ ಸೈಬಾಜ್ ಸ್ನೇಹಿತರು ವಾಪಸ್ ಬೈಕ್ ತೆಗೆದುಕೊಂಡು ಮನೆಗೆ ಬರುತ್ತಿದ್ದ ವೇಳೆ ಮತ್ತೆ ಗಲಾಟೆ ನಡೆದಿದೆ. ಇವರ ಬೈಕ್ ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಅವರೊಂದಿಗೆ ಮತ್ತೆ ತಗಾದೆ ತೆಗೆದಿದ್ದಾನೆ. ಈ ವೇಳೆ ಹಿಂದೆಯಿಂದ ಬಂದ ಮತ್ತೋರ್ವ ವ್ಯಕ್ತಿ ಬೈಕ್ ಮೇಲಿದ್ದ ಆಶ್ಪಾಕ್ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಆನಂತರ ಇನ್ನೂ ಮೂರ್ನಾಲ್ಕು ಜನ ಬಂದು ಕಟ್ಟಿಗೆಯಿಂದ ಸೈಬಾಜ್ ಸೇರಿದಂತೆ ಇನ್ನುಳಿದವರ ತಲೆಗೂ ಬಲವಾಗಿ ಹೊಡೆದಿದ್ದಾರೆ. ಈ ಎಲ್ಲ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿದವರನ್ನು ಉಳವಪ್ಪ ಧಾರವಾಡ, ರಾಜು ಕೋರಿ, ಶಿವಪ್ಪ ಕಲ್ಲೂರ, ನಿಂಗಪ್ಪ ನಡುವಿನಮನಿ, ಮುದುಕಪ್ಪ ಕಡೇಮನಿ ಎಂದು ಗುರುತಿಸಲಾಗಿದೆ. ಇವರೆಲ್ಲ ಚಿಕ್ಕಮಲ್ಲಿಗವಾಡ ಗ್ರಾಮದವರಾಗಿದ್ದು, ಸದ್ಯ ಇವರ ಮೇಲೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
