ಬಡ ರೋಗಿಗಳ ಪಾಲಿನ ಆಶಾಕಿರಣವಾಗಬೇಕಿದ್ದ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಈಗ ಭ್ರಷ್ಟಾಚಾರದ ಕೂಪವಾಗುತ್ತಿದೆಯೇ ಎಂಬ ಅನುಮಾನ ಮೂಡಿದೆ. ವೈದ್ಯಕೀಯ ಬಿಲ್ ಮರುಪಾವತಿ ಮಾಡಲು ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗವಾಗಿಯೇ ಲಂಚಕ್ಕೆ ಬೇಡಿಕೆಯಿಟ್ಟ ಆಡಿಯೋ ಈಗ ಸಂಚಲನ ಮೂಡಿಸಿದೆ.
ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಮರುಪಾವತಿ (Medical Reimbursement) ದಾಖಲೆಗಳನ್ನು ಸರಿಪಡಿಸಲು ಸರ್ಕಾರಿ ಅಧಿಕಾರಿಯೊಬ್ಬರು ಬರೋಬ್ಬರಿ 20,000 ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ. ಈಗಾಗಲೇ ಸುಮಾರು 7 ಸಾವಿರ ರೂಪಾಯಿ ಪಡೆದಿರುವ ಈ ಅಧಿಕಾರಿ, ರೋಗಿಯು ತನಗೆ ಇನ್ನೂ ವೇತನವಾಗಿಲ್ಲ ಎಂದು ಅಳಲು ತೋಡಿಕೊಂಡರೂ ಕ್ಯಾರೆ ಎನ್ನದೆ “ಇನ್ನೊಂದು 5 ಸಾವಿರ ರೂಪಾಯಿ ನೀಡಿ” ಎಂದು ಒತ್ತಾಯಿಸಿರುವುದು ಆಡಿಯೋದಲ್ಲಿ ಬಯಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಈಶ್ವರಗೌಡ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಲಂಚದ ಬೇಡಿಕೆಯಿಟ್ಟ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಡವರ ರಕ್ತ ಹೀರುವ ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
