ಬೆಳಗಾವಿಯಲ್ಲಿ ಇಂಧನ ಅಭಾವದ ವದಂತಿ ಇಂದು ವಿಕೋಪಕ್ಕೆ ತಿರುಗಿದೆ. ರಾಮದೇವ ಹೋಟೆಲ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ನಡೆದ ಭೀಕರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ವದಂತಿ ಹಬ್ಬಿಸುವವರ ವಿರುದ್ಧ ಈಗ ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.
ಬೆಳಗಾವಿಯ ರಾಮದೇವ ಹೋಟೆಲ್ ಪಕ್ಕದಲ್ಲಿರುವ ಶೇಲ್ ಪೆಟ್ರೋಲ್ ಬಂಕ್ ಬಳಿ ನಿನ್ನೆ ಮಂಗಳವಾರ ಮಧ್ಯಾಹ್ನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ ಪೆಟ್ರೋಲ್ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ, ನೂರಾರು ವಾಹನ ಸವಾರರು ಬಂಕ್ ಮುಂದೆ ಜಮಾಯಿಸಿದ್ದರು. ಈ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಕಾಲೇಜು ಯುವಕರ ಬೈಕ್ ಮತ್ತು ವ್ಯಕ್ತಿಯೊಬ್ಬರ ವಾಹನದ ನಡುವೆ ಸಣ್ಣ ಮಟ್ಟದ ಸ್ಪರ್ಶ ಉಂಟಾಗಿತ್ತು. ಇದೇ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಸಾರ್ವಜನಿಕರ ಎದುರೇ ಇಬ್ಬರ ನಡುವೆ ಭೀಕರ ಮಾರಾಮಾರಿ ನಡೆದಿತ್ತು.
ಈ ಘಟನೆಯು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಜಗಳ ಬಿಡಿಸಲು ಹರಸಾಹಸ ಪಡಬೇಕಾಯಿತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಪೊಲೀಸರು, ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದ ಮೇಲೆ ಇಬ್ಬರನ್ನು ತಕ್ಷಣವೇ ಬಂಧಿಸಿದ್ದಾರೆ. ಇನ್ನು ಮುಂದೆ ಪೆಟ್ರೋಲ್ ಬಂಕ್‌ಗಳ ಬಳಿ ಇಂತಹ ಗಲಾಟೆಗಳು ನಡೆದರೆ ಅಥವಾ ಅಶಿಸ್ತು ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಇಂಧನಕ್ಕೆ ಯಾವುದೇ ಕೊರತೆಯಿಲ್ಲ, ಯಾರೂ ವದಂತಿ ನಂಬಬಾರದು ಮತ್ತು ಬಾಟಲಿಗಳಲ್ಲಿ ಇಂಧನ ಪಡೆಯುವುದನ್ನು ನಿಷೇಧಿಸಲಾಗಿದೆ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ಸೂಚಿಸಿದ್ದಾರೆ.
