ಮಾಜಿ ಶಾಸಕ ಪುತ್ರನೊಬ್ಬ ಕಾರಿನಲ್ಲಿ ಸುಟ್ಟು ಕರಕಲಾದ ಘಟನೆ ದಾರುಣ ಘಟನೆ ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ನಿರ್ಜನ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮತ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಅವರ ಪುತ್ರ ರಾಜು ಬೋಳಶೆಟ್ಟಿ ಅವರ ಭೀಕರ ಹತ್ಯೆ ನಡೆದಿದೆ. ಮೂಲತಃ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದವರಾದ ರಾಜು ಬೋಳಶೆಟ್ಟಿ ಅವರು ಪ್ರಗತಿಪರ ರೈತರಾಗಿದ್ದರು. ಇವರ ತಂದೆ ಬಾಬುರಾವ್ ಅವರು ಬೈಲಹೊಂಗಲ ಕ್ಷೇತ್ರದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ರಾಜು ಬೋಳಶೆಟ್ಟಿ ಅವರು ಸದ್ಯ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಳ್ಳದೇ ತಮ್ಮ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಕೃಷಿ ಕಾಯಕದಲ್ಲಿ ತೊಡಗಿದ್ದರು. ಸೋಮವಾರದಿಂದ ನಾಪತ್ತೆಯಾಗಿದ್ದ ರಾಜು ಅವರು ಇದೀಗ ಧಾರವಾಡ ತಾಲೂಕಿನ ರಾಮಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆಯಿಂದ ಅವರ ಮೊಬೈಲ್‌ಗೆ ಕರೆ ಮಾಡಿದರೆ ರಿಂಗ್ ಆಗುತ್ತಿತ್ತೇ ಹೊರತು ಯಾರೂ ಅದನ್ನು ರಿಸಿವ್ ಮಾಡಿರಲಿಲ್ಲ. ಆದರೆ, ನಿನ್ನೆ ತಡರಾತ್ರಿ ಎರಡೂವರೆ ಗಂಟೆಯ ಸುಮಾರಿಗೆ ಅವರ ಮೊಬೈಲ್ ಆಫ್ ಆಗಿತ್ತು ಎಂದು ಗೊತ್ತಾಗಿದೆ. ಬೇರೆ ಕಡೆ ರಾಜು ಅವರನ್ನು ಹತ್ಯೆ ಮಾಡಿ ತಂದಿರುವ ದುಷ್ಕರ್ಮಿಗಳು ಆ ಶವವನ್ನು ಅವರದ್ದೇ ಕಾರಿನಲ್ಲಿ ತಂದು ರಾಮಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಕಾರು ಸಮೇತ ಸುಟ್ಟು ಹಾಕಿದ್ದಾರೆ. ಇಷ್ಟಕ್ಕೂ ಈ ಕೊಲೆ ನಡೆದಿರುವುದು ಏಕೆ ಹಾಗೂ ಯಾರು ಈ ಕೊಲೆ ಮಾಡಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಉಡಿಕೇರಿ ಗ್ರಾಮದ ರಾಜು ಅವರ ಹೊಲದಲ್ಲೇ ಅವರನ್ನು ಹತ್ಯೆ ಮಾಡಿ ತಂದು ರಾಮಾಪುರದ ಬಳಿ ಕಾರಿನಲ್ಲೇ ಸುಡಲಾಗಿದೆ ಎಂಬ ಅಂಶವೂ ಗೊತ್ತಾಗಿದೆ. ಉಡಿಕೇರಿಯಲ್ಲಿರುವ ಅವರ ಹೊಲದಲ್ಲಿ ಮಾರಕಾಸ್ತ್ರಗಳೂ ಪತ್ತೆಯಾಗಿವೆ. ಕಾರಿನಲ್ಲಿ ಶವ ತಂದ ದುಷ್ಕರ್ಮಿಗಳು ಯಾರಿಗೂ ಗೊತ್ತಾಗದಂತೆ ಅದಕ್ಕೆ ಪೆಟ್ರೋಲ್ ಹಾಕಿ ಸುಟ್ಟಿದ್ದಾರೆ. ಬೆಳಿಗ್ಗೆ ಹೊಲಕ್ಕೆ ಹೋಗುವವರು ಈ ಕಾರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆ ಕಾರಿನ ನಂಬರ್ ಪ್ಲೇಟ್ ಆಧಾರದ ಮೇಲೆ ಇದು ರಾಜು ಬೋಳಶೆಟ್ಟಿ ಅವರ ಕಾರು ಎಂದು ಪತ್ತೆ ಮಾಡಿದ್ದಾರೆ. ಸದ್ಯ ಕಾರಿನ ಒಳಗಡೆ ಇದ್ದ ರಾಜು ಅವರ ದೇಹ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ವಿಧಿ, ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆರಳಚ್ಚು ತಜ್ಞರು, ಎಸ್‌ಪಿ ಗುಂಜನ್ ಆರ್ಯ, ಇನ್‌ಸ್ಪೆಕ್ಟರ್ ಎಸ್.ಎಸ್.ಕಮತಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ.
