ಬೆಳಗಾವಿಯ ಪ್ರಮುಖ ಸಂಪರ್ಕ ಕೊಂಡಿಯಾದ ಹಿಂಡಲಗಾ ರಸ್ತೆಯ ದುಸ್ಥಿತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಗಣಪತಿ ಮಂದಿರದಿಂದ ಹಿಂಡಲಗಾ ರಸ್ತೆಯವರೆಗಿನ ಸುಮಾರು 800 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ಶಾಸಕ ಆಸೀಫ್ ಸೇಠ್ ಅದ್ದೂರಿ ಚಾಲನೆ ನೀಡಿದ್ದು, ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ.

ಬೆಳಗಾವಿಯ ಗಣಪತಿ ಮಂದಿರದಿಂದ ಹಿಂಡಲಗಾ ರಸ್ತೆಯ ವರೆಗಿನ ಸುಮಾರು 800 ಮೀಟರ್ ವ್ಯಾಪ್ತಿಯನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆಯು ಕೇವಲ ಡಾಂಬರೀಕರಣಕ್ಕೆ ಸೀಮಿತವಾಗದೆ, ರಸ್ತೆಯ ಮಧ್ಯಭಾಗದಲ್ಲಿ ಸುಸಜ್ಜಿತ ಡಿವೈಡರ್ ಹಾಗೂ ವೈಜ್ಞಾನಿಕವಾಗಿ ಚರಂಡಿ ವ್ಯವಸ್ಥೆಯನ್ನು ಒಳಗೊಂಡಿದೆ. ರಸ್ತೆಯ ಬಲಭಾಗದಲ್ಲಿ ಬಲಿಷ್ಠ ತಡೆಗೋಡೆ ನಿರ್ಮಿಸುವ ಮೂಲಕ ಮಳೆಗಾಲದ ಸಂದರ್ಭದಲ್ಲಿ ಉಂಟಾಗುತ್ತಿದ್ದ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶಾಸಕರು ಮುಂದಾಗಿದ್ದಾರೆ.
ಕಳೆದ ಹಲವು ಸಮಯದಿಂದ ಗುಂಡಿ ಬಿದ್ದು ಹೈರಾಣಾಗಿದ್ದ ಈ ರಸ್ತೆಯ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಈ ದೂರುಗಳಿಗೆ ತಕ್ಷಣ ಸ್ಪಂದಿಸಿರುವ ಶಾಸಕ ಆಸೀಫ್ ಸೇಠ್, ಕಾಮಗಾರಿಯು ಕೇವಲ ವೇಗವಾಗಿ ಮುಗಿಯುವುದಲ್ಲದೆ, ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಮಗಾರಿಯ ಪ್ರತಿ ಹಂತವನ್ನು ತಾವೇ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುವುದಾಗಿ ಭರವಸೆ ನೀಡಿದ್ದು, ಶಾಸಕರ ಈ ಜನಪರ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಮತ್ತು ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
