BELAGAVI

ಬೆಳಗಾವಿಯಲ್ಲಿ ಖಾಕಿ ಘರ್ಜನೆ: ಮಾರಕಾಸ್ತ್ರ ಹಿಡಿದಿದ್ದ ಕಿರಾತಕರು ಹಾಗೂ ಮಟಕಾ ಮಹಿಳೆ ಪೊಲೀಸ್ ವಶಕ್ಕೆ

Share

ಬೆಳಗಾವಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಫೀಲ್ಡಿಗಿಳಿದಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾರಕಾಸ್ತ್ರದೊಂದಿಗೆ ಸಂಚು ರೂಪಿಸುತ್ತಿದ್ದ ಮೂವರು ಯುವಕರು ಹಾಗೂ ಸಾರ್ವಜನಿಕವಾಗಿ ಮಟಕಾ ಜೂಜಾಟ ನಡೆಸುತ್ತಿದ್ದ ಮಹಿಳೆಯನ್ನ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ಮಹಾದ್ವಾರ ರಸ್ತೆಯ ಮಾಣಿಕಬಾಗ್ ಶೋ ರೂಂ ಬಳಿಯ ಓವರ್ ಬ್ರಿಡ್ಜ್ ಕೆಳಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಪಿಎಸ್‌ಐ ಹುಸೇನ್‌ಸಾಬ ಕೆರೂರ ಅವರ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಬಂಧಿತರನ್ನು ಹರ್ಷರಾಜ ಯಳ್ಳೂರಕರ, ಸಾಯಿ ಸೇನಾವೆ ಹಾಗೂ ಪ್ರೇಮ ಕಾಂಬಳೆ ಎಂದು ಗುರುತಿಸಲಾಗಿದ್ದು, ಇವರಿಂದ ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದ ಹರಿತವಾದ ತಲವಾರನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಇವರು ಯಾವುದೇ ದೊಡ್ಡ ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ್ದರೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತೊಂದೆಡೆ, ಖಡೇಬಜಾರ್‌ನ ರಾಮರಾಜ ಬಟ್ಟೆ ಅಂಗಡಿ ಬಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಆಟ ಆಡಿಸುತ್ತಿದ್ದ ಮಹಿಳೆಯ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿತೆಯಿಂದ ನಗದು ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕುತ್ತಿರುವ ಪಿಎಸ್‌ಐ ಹುಸೇನ್ ಕೆರೂರ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಯವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Tags:

error: Content is protected !!