ಬೆಳಗಾವಿ ಜಿಲ್ಲೆಯಲ್ಲಿ ಪೆಟ್ರೋಲ್ ಸಿಗುವುದಿಲ್ಲ ಎಂಬ ವದಂತಿ ಈಗ ಸಾರ್ವಜನಿಕರ ಸಂಘರ್ಷಕ್ಕೆ ನಾಂದಿ ಹಾಡಿದೆ. ನಗರದ ಪೆಟ್ರೋಲ್ ಬಂಕ್ಗಳ ಮುಂದೆ ಕಿಲೋಮೀಟರ್ ಉದ್ದದ ಸಾಲು ನಿಂತಿದ್ದು, ಈ ವೇಳೆ ವಾಹನ ಸವಾರರ ನಡುವೆ ನಡೆದ ಮಾತಿನ ಚಕಮಕಿ ರಕ್ತಪಾತದ ಹಂತಕ್ಕೆ ತಲುಪಿರುವುದು ಆತಂಕ ಮೂಡಿಸಿದೆ.
ಬೆಳಗಾವಿಯ ರಾಮದೇವ ಹೋಟೆಲ್ ಪಕ್ಕದಲ್ಲಿರುವ ಶೇಲ್ ಪೆಟ್ರೋಲ್ ಬಂಕ್ ಬಳಿ ಇಂದು ಮಂಗಳವಾರ ಮಧ್ಯಾಹ್ನ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ ಪೆಟ್ರೋಲ್ ಅಭಾವ ಸೃಷ್ಟಿಯಾಗಲಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ, ನೂರಾರು ವಾಹನ ಸವಾರರು ಬಂಕ್ ಮುಂದೆ ಜಮಾಯಿಸಿದ್ದರು. ಈ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಕಾಲೇಜು ಯುವಕರ ಬೈಕ್ ಮತ್ತು ವ್ಯಕ್ತಿಯೊಬ್ಬರ (ಅಂಕಲ್) ವಾಹನದ ನಡುವೆ ಸಣ್ಣ ಮಟ್ಟದ ಸ್ಪರ್ಶ ಉಂಟಾಗಿದೆ. ಇದೇ ಕಾರಣಕ್ಕೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಸಾರ್ವಜನಿಕರ ಎದುರೇ ಇಬ್ಬರ ನಡುವೆ ಭೀಕರ ಮಾರಾಮಾರಿ ನಡೆದಿದೆ.
ಇಂಧನ ಸಿಗದೆ ಕಂಗಾಲಾಗಿದ್ದ ಜನವೋ ಜನ ಸೇರಿದ ಪರಿಣಾಮ ಇಡೀ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಈ ಘಟನೆಯು ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಲು ಹರಸಾಹಸ ಪಡಬೇಕಾಯಿತು. ಜಿಲ್ಲಾಡಳಿತವು ವದಂತಿಗಳಿಗೆ ಕಿವಿಗೊಡದಂತೆ ತಿಳಿಸುತ್ತಿದ್ದರೂ, ಜನರ ಆತಂಕ ಮತ್ತು ಇಂತಹ ಘಟನೆಗಳು ನಗರದ ಶಾಂತಿ ಕೆಡಿಸುತ್ತಿವೆ.
