ಖಾನಾಪುರದ ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರು ರಾಷ್ಟ್ರ ರಾಜಕಾರಣದಲ್ಲಿ ಗಮನಾರ್ಹವಾಗಿ ಬೆಳೆಯುತ್ತಿದ್ದಾರೆ. ಸದ್ಯ ಪುದುಚೇರಿ ಚುನಾವಣೆಯ ಟಿಕೆಟ್ ಹಂಚಿಕೆಯಂತಹ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಭಾವ ಸಾಬೀತುಪಡಿಸಿದ್ದಾರೆ.
ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ರಾಜಕೀಯ ಪಯಣ ಆರಂಭಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರು ಇಂದು ಎಐಸಿಸಿ ಕಾರ್ಯದರ್ಶಿಯಾಗಿ ದೇಶದ ವಿವಿಧ ರಾಜ್ಯಗಳ ಉಸ್ತುವಾರಿ ಹೊತ್ತು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಪುದುಚೇರಿ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‌ಗೆ 16 ಮತ್ತು ಡಿಎಂಕೆಗೆ 14 ಸ್ಥಾನಗಳನ್ನು ಅಂತಿಮಗೊಳಿಸುವಲ್ಲಿ ಇವರು ವಹಿಸಿದ ಪಾತ್ರ ಅತ್ಯಂತ ನಿರ್ಣಾಯಕವಾದುದು. ಸ್ಥಳೀಯ ಮಟ್ಟದಿಂದ ರಾಷ್ಟ್ರ ಮಟ್ಟದ ಟಿಕೆಟ್ ಹಂಚಿಕೆಯ ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಕ್ಕೆ ಏರಿರುವುದು ಅವರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ರಾಜಕೀಯ ವಲಯದಲ್ಲಿ ಮತ್ತು ಅವರ ಅಭಿಮಾನಿ ಬಳಗದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ಮುಂದಿನ ದಿನಗಳಲ್ಲಿ ಅವರು ಪಕ್ಷದಲ್ಲಿ ಇನ್ನೂ ಹೆಚ್ಚಿನ ಉನ್ನತ ಜವಾಬ್ದಾರಿಗಳನ್ನು ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
