BELAGAVI

ವಿದ್ಯುತ್ ಕಂಬ ಸ್ಥಳಾಂತರ ಕಿರಿಕ್; ತಂದೆಯನ್ನು ರಕ್ಷಿಸಲು ಬಂದ ಬಾಲಕಿ ಮೇಲೆ ಭೀಕರ ಹಲ್ಲೆ!

Share

ವಿದ್ಯುತ್ ಕಂಬ ಸ್ಥಳಾಂತರದ ಸಣ್ಣ ವಿಚಾರವೊಂದು ವಿಕೋಪಕ್ಕೆ ತಿರುಗಿ, ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ತಂದೆಯ ಮೇಲಿನ ಹಲ್ಲೆ ತಡೆಯಲು ಬಂದ ಮಗಳ ಮೇಲೆ ಆರೋಪಿಗಳು ಕೈಮಾಡಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಬಸ್ತವಾಡ-ಹಲಗಾ ಗ್ರಾಮದ ನಿವಾಸಿ ಅರುಣ ತಳವಾರ ಅವರ ಮನೆಯ ಮುಂದೆ ವಿದ್ಯುತ್ ಕಂಬ ಸ್ಥಳಾಂತರದ ವಿಷಯವಾಗಿ ಗಲಾಟೆ ಆರಂಭವಾಗಿದೆ. ಆರೋಪಿಗಳಾದ ನಾಗಪ್ಪ ತಳವಾರ ಮತ್ತು ಪುಂಡಲೀಕ ಕೋಲಕಾರ ಎಂಬುವವರು ಅರುಣ ಅವರ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅರುಣ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ತಂದೆಯನ್ನು ರಕ್ಷಿಸಲು ಬಂದ ಮಗಳು ಪಲ್ಲವಿ ತಳವಾರ ಎಂಬ ಬಾಲಕಿಯ ಮೇಲೆ ಆರೋಪಿಗಳು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಬಾಲಕಿಯ ಕಿವಿ ಮತ್ತು ಕಪಾಳದ ಭಾಗಕ್ಕೆ ಬಲವಾಗಿ ಹೊಡೆದು ಗಾಯಗೊಳಿಸಲಾಗಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ ಪಲ್ಲವಿಯನ್ನು ತಕ್ಷಣವೇ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಲಕಿಯ ಸ್ಥಿತಿ ಸದ್ಯ ಸ್ಥಿರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಕೇವಲ ಹಲ್ಲೆಯಷ್ಟೇ ಅಲ್ಲದೆ, ಗಲಾಟೆಯ ಸಂದರ್ಭದಲ್ಲಿ ಶಶಿಕಲಾ ತಳವಾರ ಹಾಗೂ ಸಂದೀಪ ತಳವಾರ ಎಂಬುವವರು ಅರುಣ ತಳವಾರ ಅವರ ದ್ವಿಚಕ್ರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ವಾಹನ ಸಂಪೂರ್ಣವಾಗಿ ಜಖಂಗೊಂಡಿದ್ದು, ಆರೋಪಿಗಳು ದಾಂಧಲೆ ನಡೆಸಿರುವುದಾಗಿ ಪಲ್ಲವಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಲ್ಲೆ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ ತಳವಾರ ಅವರು ನೀಡಿದ ದೂರಿನನ್ವಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸಣ್ಣಪುಟ್ಟ ವಿಚಾರಗಳಿಗೆ ಹಳ್ಳಿಗಳಲ್ಲಿ ನಡೆಯುತ್ತಿರುವ ಇಂತಹ ಸರಣಿ ಗಲಾಟೆಗಳು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಬೈಟ್

Tags:

error: Content is protected !!