BELAGAVI

ಮಥುರಾದಲ್ಲಿ ಗೋರಕ್ಷಕ ಸ್ವಾಮೀಜಿ ಹತ್ಯೆ:

Share

ಉತ್ತರ ಪ್ರದೇಶದ ಮಥುರಾದಲ್ಲಿ ಗೋರಕ್ಷಕ ಚಂದ್ರಶೇಖರ ಸ್ವಾಮೀಜಿಯವರನ್ನು ವಾಹನ ಹರಿಸಿ ಭೀಕರವಾಗಿ ಹತ್ಯೆ ಮಾಡಿರುವುದು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯನ್ನು ಖಂಡಿಸಿ ಬೆಳಗಾವಿಯ ಕಾಮಧೇನು ಅಯ್ಯಪ್ಪ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಲಾಗಿದೆ.

ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಈ ಕುರಿತಾದ ಮನವಿಯನ್ನು ಸಲ್ಲಿಸಲಾಯಿತು.
ದಿನಾಂಕ 21-03-2026ರಂದು ಮಥುರಾದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ತಡೆದಿದ್ದಕ್ಕಾಗಿ ಗೋರಕ್ಷಕ ಚಂದ್ರಶೇಖರ ಸ್ವಾಮೀಜಿಯವರನ್ನು ಹಂತಕರು ವಾಹನ ಹರಿಸಿ ಹತ್ಯೆ ಮಾಡಿದ್ದಾರೆ. ಗೋಮಾತೆಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ ಸ್ವಾಮೀಜಿಯವರನ್ನು ವಿನಾಕಾರಣ ವಾದ ವಿವಾದಕ್ಕಿಳಿದು, ಕ್ರೂರವಾಗಿ ಕೊಲೆ ಮಾಡಿರುವುದು ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಗೋರಕ್ಷಕ ನಿಲೇಶ್ ಅವರ ನೇತೃತ್ವದಲ್ಲಿ ಕಾಮಧೇನು ಅಯ್ಯಪ್ಪ ಸಂಸ್ಥೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಈ ಅಮಾನವೀಯ ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಮೃತ ಸ್ವಾಮೀಜಿಯವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಈ ಕುರಿತು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರಿಗೂ ಮನವಿ ಪತ್ರದ ಪ್ರತಿಯನ್ನು ರವಾನಿಸಲಾಗಿದೆ. “ಗೋರಕ್ಷಕರ ಮೇಲೆ ನಡೆಯುತ್ತಿರುವ ಇಂತಹ ಸರಣಿ ದಾಳಿಗಳನ್ನು ಸಹಿಸಲು ಸಾಧ್ಯವಿಲ್ಲ, ಹಂತಕರಿಗೆ ಮರಣದಂಡನೆ ಶಿಕ್ಷೆಯಾಗಬೇಕು” ಎಂದು ಗೋರಕ್ಷಕ ನಿಲೇಶ್ ಅವರು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!