ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಸಂಶಯದ ಪೆಡಂಭೂತಕ್ಕೆ ಅಮಾಯಕ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಚಾರಿತ್ರ್ಯದ ಮೇಲೆ ವಿನಾಕಾರಣ ಸಂಶಯ ವ್ಯಕ್ತಪಡಿಸುತ್ತಿದ್ದ ಪತಿ, ಕಲ್ಲಿನಿಂದ ಜಜ್ಜಿ ಪತ್ನಿಯನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬೈಲಹೊಂಗಲ ತಾಲ್ಲೂಕಿನ ಗೋವನಕೊಪ್ಪ ಗ್ರಾಮದ ಬಸವರಾಜ ಗಿರೆಪ್ಪ ಜೋಡಳ್ಳಿ ಎಂಬಾತನೇ ತನ್ನ ಪತ್ನಿ ಶಿವಕ್ಕ (33) ಎಂಬಾಕೆಯನ್ನು ಹತ್ಯೆ ಮಾಡಿದ ಆರೋಪಿ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಆದರೆ ಕಳೆದ 6 ವರ್ಷಗಳಿಂದ ಆರೋಪಿಯು ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟು ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳ ತಾಳಲಾರದೆ ಶಿವಕ್ಕ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತವರು ಮನೆಗೆ ಬಂದು ನೆಲೆಸಿದ್ದಳು.

ಊರಿಗೆ ಬರುತ್ತಿದ್ದ ಬಸವರಾಜ, ಹೆಂಡತಿಗೆ ಜೀವ ಬೆದರಿಕೆ ಹಾಕುತ್ತಿದ್ದ ಬಗ್ಗೆ ಈ ಹಿಂದೆಯೇ ದೊಡವಾಡ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಿನಾಂಕ 21-03-2026ರ ಶನಿವಾರ ಮುಂಜಾನೆ 07:30ರ ಸುಮಾರಿಗೆ ಮನೆಗೆ ಬಂದ ಆರೋಪಿ, ಶಿವಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯ ಮುಂದಿನ ರಸ್ತೆಗೆ ಎಳೆದೊಯ್ದಿದ್ದಾನೆ. ಅಲ್ಲಿ ತೀವ್ರವಾಗಿ ಹಲ್ಲೆ ನಡೆಸಿದ್ದಲ್ಲದೆ, ರಸ್ತೆಯಲ್ಲಿದ್ದ ದೊಡ್ಡ ಕಲ್ಲನ್ನು ಎತ್ತಿ ತಲೆ ಹಾಗೂ ಕಾಲಿನ ಮೇಲೆ ಒಗೆದು ಆಕೆಯನ್ನು ಸ್ಥಳದಲ್ಲೇ ಭೀಕರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದೊಡವಾಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಎಸ್ಪಿ ಕೆ. ರಾಮರಾಜನ್ ಅವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ತನಿಖೆ ನಡೆದಿದ್ದು, ಪತ್ತೆ ಹಚ್ಚಿದ ತಂಡವನ್ನು ಪೊಲೀಸ್ ಇಲಾಖೆ ಶ್ಲಾಘಿಸಿದೆ.
