State

ಸುಳ್ಳೇ ಬಿಜೆಪಿಯ ಮನೆದೇವ್ರು; ಸಿಎಂ ಸಿದ್ಧರಾಮಯ್ಯ

Share

ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇಶ್ ಮೇಟಿ ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿಯ ಬೆಂಬಲಕ್ಕೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಚುನಾವಣೆ ದಿವಂಗತ ಹೆಚ್.ವೈ. ಮೇಟಿ ಅವರ ಕನಸಿನ ಮುಂದುವರಿಕೆ ಎಂದು ಬಣ್ಣಿಸುವುದರ ಜೊತೆಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, “ಹೆಚ್.ವೈ. ಮೇಟಿಯವರು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದ್ದರು, ಆದರೆ ಅವರ ಅಕಾಲಿಕ ನಿಧನದಿಂದಾಗಿ ಇಂದು ಅನಿವಾರ್ಯವಾಗಿ ಉಪಚುನಾವಣೆ ಬಂದಿದೆ. ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿದ ನಂತರವೇ ಮೇಟಿ ಕುಟುಂಬಕ್ಕೆ ನ್ಯಾಯ ಒದಗಿಸಲು ಉಮೇಶ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಇಲ್ಲಿ ಕುಟುಂಬದ ರಾಜಕಾರಣಕ್ಕಿಂತ ಹೆಚ್ಚಾಗಿ ಜನರ ಭಾವನೆ ಮತ್ತು ಮೇಟಿಯವರ ಮೇಲಿದ್ದ ಗೌರವಕ್ಕೆ ಆದ್ಯತೆ ನೀಡಲಾಗಿದೆ” ಎಂದು ಸಮರ್ಥಿಸಿಕೊಂಡರು.

ತಮ್ಮ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟ ಸಿಎಂ, “ನಾವು ನುಡಿದಂತೆ ನಡೆಯುವ ಸರ್ಕಾರ. ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು 1.20 ಲಕ್ಷ ಕೋಟಿ ರೂಪಾಯಿಗಳನ್ನು ಬಡವರ ಕಲ್ಯಾಣಕ್ಕಾಗಿ ವ್ಯಯಿಸಿದ್ದೇವೆ. ಯುಕೆಪಿ-3 ಹಂತದ ನೀರಾವರಿ ಯೋಜನೆ ಹಾಗೂ ಸಂತ್ರಸ್ತ ರೈತರಿಗೆ ನೀಡುತ್ತಿರುವ ಭರ್ಜರಿ ಪರಿಹಾರ ನಮ್ಮ ಬದ್ಧತೆಗೆ ಸಾಕ್ಷಿ. ದಿವಂಗತ ಮೇಟಿಯವರ ಒತ್ತಾಯದ ಮೇರೆಗೆ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಡಿಗಲ್ಲು ಹಾಕಲಾಗಿದೆ. ಮೇಟಿಯವರು ಇದ್ದಿದ್ದರೆ ಈ ಅಭಿವೃದ್ಧಿ ಕಂಡು ಖುಷಿಪಡುತ್ತಿದ್ದರು. ಅವರ ಬಡವರ ಪರವಾದ ಚಿಂತನೆಗಳನ್ನು ಉಮೇಶ್ ಮುಂದುವರಿಸಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿ ಮತ್ತು ಮುಸ್ಲಿಂ ಸಮುದಾಯದ ಅಸಮಾಧಾನದ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಿಜೆಪಿಯ ಮನೆದೇವ್ರು ಸುಳ್ಳು, ಅವರಿಗೆ ಹಿಂದುತ್ವ ಬಿಟ್ಟರೆ ಅಭಿವೃದ್ಧಿ ಗೊತ್ತಿಲ್ಲ. ಇನ್ನು ಟಿಕೆಟ್ ವಿಚಾರದಲ್ಲಿ ಅಲ್ಪಸಂಖ್ಯಾತರು ಅಸಮಾಧಾನಗೊಂಡಿರುವುದು ನಿಜ, ಆದರೆ ನಾವು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದೇವೆ. ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಗೆಲ್ಲಿಸಿರುವ ಇತಿಹಾಸ ನಮ್ಮದು, ಅಸಮಾಧಾನಿತರನ್ನು ಕರೆದು ಮಾತನಾಡಿಸಿ ಸೂಕ್ತ ಸ್ಥಾನಮಾನ ನೀಡುತ್ತೇವೆ. ನಮ್ಮದು ‘ಡಬಲ್ ಸ್ಟೇರಿಂಗ್’ ಸರ್ಕಾರ ಎನ್ನುವ ಶ್ರೀರಾಮುಲು ಅವರೇ ಚುನಾವಣೆಯಲ್ಲಿ ಸೋತು ಮನೆಯಲ್ಲಿ ಕುಳಿತಿದ್ದಾರೆ, ಜನ ಅವರನ್ನು ತಿರಸ್ಕರಿಸಿದ್ದಾರೆ” ಎಂದು ಲೇವಡಿ ಮಾಡಿದರು.

Tags:

error: Content is protected !!