ಕೇಂದ್ರ ಸರ್ಕಾರದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಸಂರಕ್ಷಣೆ ತಿದ್ದುಪಡಿ ಮಸೂದೆ 2026ರ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆಯ ಕಿಚ್ಚು ಹತ್ತಿದೆ. ಲಿಂಗತ್ವ ಅಲ್ಪಸಂಖ್ಯಾತರ ಘನತೆ ಮತ್ತು ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಸಮುದಾಯದ ನಾಯಕರು, ಬೃಹತ್ ರ್ಯಾಲಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದವರೆಗೆ ಅದ್ಧೂರಿ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.
ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 2026ರ ಹೊಸ ತಿದ್ದುಪಡಿ ಮಸೂದೆಯು ಸಂವಿಧಾನಬದ್ಧವಾಗಿ ಸಿಕ್ಕಿರುವ ಲಿಂಗ ಗುರುತಿನ ಸ್ವಯಂ ನಿರ್ಣಯದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ನ ಐತಿಹಾಸಿಕ ‘ನಲ್ಸಾ’ (NALSA) ತೀರ್ಪಿನ ಅನ್ವಯ ದೊರೆತಿರುವ ದೇಹದ ಸ್ವಾಯತ್ತತೆ ಮತ್ತು ಮೂಲಭೂತ ಹಕ್ಕುಗಳಿಗೆ ಈ ಮಸೂದೆ ನೇರ ಧಕ್ಕೆ ತರುತ್ತಿದೆ ಎಂದು ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಮುದಾಯದ ಮುಖಂಡರು, 2017ರ ಕರ್ನಾಟಕ ರಾಜ್ಯ ಲಿಂಗತ್ವ ಅಲ್ಪಸಂಖ್ಯಾತ ನೀತಿಗೆ ಈ ಹೊಸ ತಿದ್ದುಪಡಿ ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಟ್ರಾನ್ಸ್ಜೆಂಡರ್” ಎಂಬ ಪದದ ವ್ಯಾಪ್ತಿಯನ್ನು ಸೀಮಿತಗೊಳಿಸುವ ಮೂಲಕ ಸಮುದಾಯದ ದೊಡ್ಡ ವಿಭಾಗವನ್ನೇ ಕಾನೂನಿನ ರಕ್ಷಣೆಯಿಂದ ಹೊರಗಿಡಲು ಯತ್ನಿಸಲಾಗುತ್ತಿದೆ. ಇದು ನಮ್ಮ ಅಸ್ಮಿತೆಯನ್ನು ಅಳಿಸಿ ಹಾಕುವ ಪ್ರಯತ್ನವಾಗಿದ್ದು, ಲಿಂಗ ವೈವಿಧ್ಯತೆಯುಳ್ಳ ವ್ಯಕ್ತಿಗಳ ಮೇಲೆ ತಾರತಮ್ಯ ಎಸಗಲು ಈ ಮಸೂದೆ ಹಾದಿ ಮಾಡಿಕೊಡುತ್ತದೆ ಎಂದು ಪ್ರತಿಭಟನಾಕಾರರು ದೂರಿದರು. ಕೂಡಲೇ ಈ ವಿವಾದಿತ 2026ರ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಬೇಕು ಮತ್ತು ಲಿಂಗತ್ವ ಅಲ್ಪಸಂಖ್ಯಾತರನ್ನು ಪೂರ್ಣ ನಾಗರಿಕರಾಗಿ ಒಳಗೊಳ್ಳುವ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಮಸೂದೆ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಲಿಂಗತ್ವ ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
