ಬೆಳಗಾವಿ ಜಿಲ್ಲೆಯ ಮುರಗೋಡ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ರಕ್ತಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಕೇವಲ ಹೊಲಕ್ಕೆ ನೀರು ಹರಿಸುವ ವಿಚಾರಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಣ್ಣನೇ ಸ್ವಂತ ತಮ್ಮನನ್ನು ಬಲಿಪಡೆದ ಮನಕಲಕುವ ಘಟನೆ ನಡೆದಿದೆ.
ಮುರಗೋಡ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಜಮೀನಿನ ನೀರಾವರಿ ಹಂಚಿಕೆ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಮಾರಾಮಾರಿ ನಡೆದಿದೆ. 45 ವರ್ಷದ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ ಎಂಬುವವರೇ ಕೊಲೆಯಾದ ದುರ್ದೈವಿ. ಶನಿವಾರ ಮಧ್ಯಾಹ್ನ ನೀರಿನ ವಿಷಯವಾಗಿ ಯಲ್ಲಪ್ಪ ಮತ್ತು ಅವರ ಅಣ್ಣ 55 ವರ್ಷದ ಮಹಾದೇವಪ್ಪ ಸಣ್ಣಮ್ಮನವರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಇದು ತಾರಕಕ್ಕೇರಿದಾಗ ಮಹಾದೇವಪ್ಪ ತನ್ನ ತಮ್ಮನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಯಲ್ಲಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮುರಗೋಡ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪತಿಯ ಸಾವಿನ ಕುರಿತು ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸದ್ಯ ಹತ್ಯೆ ಮಾಡಿದ ಆರೋಪಿ ಮಹಾದೇವಪ್ಪನನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಕ್ಷುಲ್ಲಕ ಕಾರಣಕ್ಕೆ ನಡೆದ ಈ ಕೊಲೆ ಪ್ರಕರಣ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ.
