ವಿಜಯಪುರ ಜಿಲ್ಲೆಯ ಕತ್ನಳ್ಳಿಯ ಶ್ರೀ ಗುರು ಚಕ್ರವರ್ತಿಯ ಸದಾಶಿವಯ್ಯನ ಜಾತ್ರೆ ಪ್ರತಿ ವರ್ಷ ಕೂಡ ವಿಜೃಂಬಣೆಯಿಂದ ನಡೆಯುತ್ತದೆ. ಜಾತ್ರೆಯ ಪ್ರಯುಕ್ತ ಹಲವು ಸಾಮೂಹಿಕ ಮದುವೆಗಳನ್ನು ಮಾಡಲಾಗುತ್ತದೆ. ಇಲ್ಲಿನ ವಿಶೇಷತೆ ಎಂದರೆ ಕಾಲಜ್ಞಾನ ನುಡಿಯುವದು. ಇಲ್ಲಿ ನುಡಿದ ಕಾಲಜ್ಞಾನ ಆಧರಿಸಿಯೇ ತಮ್ಮ ಯೋಜನೆಗಳನ್ನು ಭಕ್ತಾದಿಗಳು ರೂಪಿಸುತ್ತಾರೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…

ಹೌದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಯುಗಾದಿಯ ವೇಳೆ ಸದಾಶಿವ ಮುತ್ಯಾನ ಜಾತ್ರೆ ನಡೆಯಿತು. ವಿಜಯಪುರ ತಾಲೂಕಿನ ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀಗುರು ಚಕ್ರವರ್ತಿ ಸದಶಿವ ಮುತ್ಯ ನೆಲೆಸಿದ್ದಾನೆ. ಈ ಪವಾಡ ಪುರುಷನ ಜಾತ್ರೆಯನ್ನು ಪ್ರತೀ ವರ್ಷ ಯುಗಾದಿಯ ವೇಳೆ ಒಂದು ವಾರದ ವರೆಗೆ ನಡೆಸಲಾಗುತ್ತದೆ. ಈ ವೇಳೆ ಇಲ್ಲಿನ ಪೀಠಾಧಿಪತಿಗಳಾದ ಶಿವಯ್ಯ ಮಹಾ ಸ್ವಾಮೀಜಿಗಳು ಮುಂದಿನ ವರ್ಷದ ಭವಿಷ್ಯ ನುಡಿಯುತ್ತಾರೆ. ಹೀಗೆ ಈ ಬಾರಿ ನುಡಿದ ಭವಿಷ್ಯ ಜನಸಾಮಾನ್ಯರನ್ನು ಹಿಡಿದು ರಾಜಕೀಯದ ವರೆಗೂ ಹುಚ್ಚು ಹಿಡಿಸುವಂತಾಗಿದೆ. ಯಾಕಂದ್ರೆ ಇಲ್ಲಿ ನುಡಿದಿದ್ದ ಭವಿಷ್ಯ ಎಂದೂ ಸುಳ್ಳಾಗಿಲ್ಲ ಎಂಬುದು ಅಷ್ಟೇ ನಂಬಿಕೆಯಿದೆ. ಇನ್ನೂ ಈ ಬಾರಿ ಜಾತ್ರೆಯ ಅಂಗವಾಗಿ 52 ಜೋಡಿ ಸಾಮೂಹಿಕ ಮದುವೆಯನ್ನು ಸಹಿತ ಮಾಡಲಾಯಿತು…

ಈ ಬಾರಿ ಅಚ್ಚರಿಯ ಭವಿಷ್ಯವನ್ನು ಸದಾಶಿವ ಮುತ್ಯಾ ನುಡಿದಿದ್ದಾರೆ. ಅಕ್ರಾಳ, ವಿಕ್ರಾಳ, ಕರಾಳ ಈ ಬಾರಿಯೂ ಇದ್ದದ್ದೇ, ಯುದ್ದ ಅಲ್ಲಿ ಅಷ್ಟೇ ಅಲ್ಲ ಇಲ್ಲಿಯೂ ಇದ್ದಂತೆಯೇ… ಜಗತ್ತಿನ ಉದ್ಧಾರಕ್ಕಾಗಿ ‘ಶು.ನ.ಕ. ಮೀಟಿಂಗ್ ನಡೆದಿದೆ ಎಂದು ಹೇಳುವ ಮೂಲಕ ಕತಕನಹಳ್ಳಿಯ ಶ್ರೀ ಶಿವಯ್ಯ ಮಹಾಸ್ವಾಮೀಜಿ ಕಾಲಜ್ಞಾನದ ಹೇಳಿಕೆ ನುಡಿದರು. ಸುಕ್ಷೇತ್ರ ಕತಕನಹಳ್ಳಿಯಲ್ಲಿ ಶ್ರೀ ಗುರುಚಕ್ರವರ್ತಿ ಸದಾಶಿವ ಮುತ್ಯಾ ಅವರ ಜಾತ್ರಾ ಮಹೋತ್ಸವ ಪ್ರಯುಕ್ತ ಗುರು ಕರುಣೆಯ ಮೂಲಕ ಶ್ರೀ ಶಿವಯ್ಯ ಮಹಾಸ್ವಾಮೀಜಿ ಭವಿಷ್ಯದ ಕಾಲಜ್ಞಾನ ಹೇಳಿಕೆ ನೀಡುವುದು ಸಂಪ್ರದಾಯ. ಈ ಸಂಪ್ರದಾಯ ಹಿನ್ನೆಲೆಯಲ್ಲಿ ಕತಕನಹಳ್ಳಿಯ ಲಗಮವ್ವ ದೇವಿ ದೇವಾಲಯದ ಎದುರು ಶ್ರೀ ಶಿವಯ್ಯ ಸ್ವಾಮೀಜಿಗಳು ಗುರು ಕರುಣೆಯ ನುಡಿಗಳನ್ನಾಡಿದರು.
ಶು.ನ.ಕ. ಮೀಟಿಂಗ್ ನಡೆದಿದೆ ಎಂದು ತಾತ್ಪರ್ಯವುಳ್ಳ ಪದ ಹೇಳಿ ಅದನ್ನು ವಿಶ್ಲೇಷಿಸಿದ ಅವರು, ಶು ಎಂದರೆ ಶುದ್ದ, ನ ಎಂದರೆ ನಂಬಿಕೆ ಹಾಗೂ ಕ ಎಂದರೆ ಕರ್ತವ್ಯ, ಈ ಎಲ್ಲವೂ ಕೂಡಿದರೆ ಜಗತ್ತು ಉದ್ಧಾರ, ಹೀಗಾಗಿ ಜಗತ್ತು ಉಳಿಸಲು ಈ ತತ್ವಗಳು ಮೀಟಿಂಗ್ ಮಾಡುತ್ತಿವೆ ಎಂದರು. ಕಾವಿ, ಖಾದಿ, ಖಾಕಿ, ಮೂರು ಒಳಗೆ ಜಗಳ ಆಗ್ತದ ಎಂದು ಹಿಂದೆಯೂ ಹೇಳಿದೆ,
ಕಾವಿ, ಖಾದಿ, ಖಾಕಿ, ಜೊತೆಗೆ
ಕಪ್ಪು, ಹಸಿರು, ನೀಲಿ ಇನ್ನಷ್ಟೂ ಬಣ್ಣ ಕೂಡಿ ಮಿಕ್ಸರ್ ಆಗುತ್ತಿವೆ. ಗದ್ದಲವಾಗುತ್ತಿದೆ, ಹೀಗಾಗಿಯೇ ಇದನ್ನು ತಪ್ಪಿಸಲು ಶು.ನ.ಕ. ಮೀಟಿಂಗ್ ಮಾಡುತ್ತಿವೆ ಎಂದರು. ಕಳೆದ ಬಾರಿ ಭಕ್ತಿಯ ಭಾವ ಪರವಶರಾಗಿ ಕೇವಲ 3.35 ನಿಮಿಷ ಅಷ್ಟೇ ಕಾಲಜ್ಞಾನ ನುಡಿದಿದ್ದ ಗುರುಗಳು ಈ ಬಾರಿ ನೀವು ಎಷ್ಟು ಶಾಂತ ಎಷ್ಟು ಇರ್ತೀರಿ ಅಷ್ಟು ಹೆಚ್ಚಿಗೆ ಹೇಳ್ತಿನಿ… ಕೇಳುತ್ತೀರಾ ಎಂದು ಕಾಲಜ್ಞಾನ ನುಡಿ ಹೇಳಲು ಆರಂಭಿಸಿ ಈ ಬಾರಿ 12.13 ನಿಮಿಷಗಳ ಕಾಲ ಜ್ಞಾನ ಹೇಳಿಕೆ, ಭವಿಷ್ಯದ ಮುನ್ನೋಟವನ್ನು ತೆರೆದಿಟ್ಟರು.
ಅಹಂಕಾರ ಮಾಡಿದವರೆಲ್ಲ ಮಣ್ಣಾಗಿ ಹೋಗುತ್ತಾರೆ, ನಾ ಹಿಂದೆಯೂ ಹೇಳಿದೆ ಗಡ್ಡ, ಗುಡ್ಡ, ಗಿಡ್ಡ ಜಗಳಾಡಿ ಗದ್ದಲ ಹಿಡಿಸುತ್ತಾರೆ ಎಂದು, ಈಗ ಅದೇ ಆಗುತ್ತಿದೆ… ಅಲ್ಲಿ ಯುದ್ದ ನಡೆದಿದೆ ನಮಗೆ ಸಂಬಂಧವಿಲ್ಲ ಎಂದೇನಿಲ್ಲ, ಇಲ್ಲಿಯೂ ಯುದ್ದ ನಡೆದಂತೆಯೇ ಎಂದರು. ಆನೆ ಬೆಲೆ ಎತ್ತಿಗೆ, ಎತ್ತಿನ ಬೆಲೆ ಕುರಿಗೆ, ಕುರಿ ಬೆಲೆ ಕೋಳಿಗೆ, ಕೋಳಿ ಬೆಲೆ ಮನುಷ್ಯನಿಗೆ ಅಂದರೆ ಮನುಷ್ಯನಿಗೆ ಯಾವ ಕಿಮ್ಮತ್ತೂ ಉಳಿದಿಲ್ಲ ಎಂದರು. ಮಳೆಗಾಲದ ಬಗ್ಗೆ ವಿಶ್ಲೇಷಿಸಿದ ಅವರು, ಮಳೆಗಾಲ ಈ ಬಾರಿ ಭಾಳ ಮಜಾ ಇದೆ, ಮಳೆಗಾಲ ಮಜಾ ಮಳೆ ಬೆನ್ನ ಬೆಳಿ ಹತ್ತೈತಿ. ಮುಂದ ಬೆಳಿ ಬೆನ್ನ ಮಳಿ ಹತ್ತೈತಿ. ಐದು ಪ್ರಕಾರದ ಮಳಿ ಆಗ್ತೈತಿ. ಅತಿವೃಷ್ಟಿ, ಅಲ್ಪವೃಷ್ಟಿ, ಸಮವೃಷ್ಟಿ, ಅನಾವೃಷ್ಟಿ ಆಗ್ತೈತಿ ಎನ್ನುವ ಮೂಲಕ ಮಳೆ ಅಭಾವ, ಮಳೆ ಹೆಚ್ಚಳ, ಅಕಾಲಿಕ ಮಳೆ ಮೊದಲಾದವುಗಳು ಸಂಭವಿಸಲಿವೆ ಎಂದು ಸಾಂಕೇತಿಕವಾಗಿ ನುಡಿದರು.
ವ್ಯಾಪಾರ, ವ್ಯವಹಾರ ಏರ್ತಾ ಇಳಿತಾವ ಎಂದರು. ಹೆಣ್ಣ ಮಕ್ಕಳು ವೇಷಣ, ಭೂಷಣ, ಸಂಭಾಷಣದಲ್ಲಿ ನಮ್ಮ ಭವ್ಯ ಸಂಸ್ಕೃತಿ ಅನುಸರಿಸಬೇಕು, ಆರಾಧಿಸಬೇಕು ಎಂದರು. ಉಳಿವಿಯಲ್ಲಿ ಉರುಳುತ್ತಾ ಬರುವ ಶಬ್ದ, ನಾನು ಮೇಲು ನಾನು ಮೇಲು ಎನ್ನುವ ಅಹಂಕಾರವನ್ನು ಅಡಗಿಸುತ್ತದೆ. ಹಸಿರು ನಾಮದ ಒಡೆಯ, ಹಂಡ ಕುದುರೆಯನೇರಿ, ಅರಸಾಗಿ ಬರುವಾಗ ದೈತ್ಯರನ್ನು ಸಂಹರಿಸುತ್ತಾನೆ, ಮಸಲತ್ತು ಮಾಡಿ ಹಿಂಸೆ ಕೊಡುವ ದೈತ್ಯರಿಗೆ ಸಂಹಾರ ಮಾಡಿ ಅವರನ್ನು ಪಾತಾಳಕ್ಕೆ ತಲುಪಿಸುವನು ಎಂದರು. ಯುದ್ದ ಎಲ್ಲ ಕಡೆ ನಡೆದ ಬಿಟ್ಟೈತಿ, ಜಾತಿ, ಮತ, ಪಂಥ ಏನೂ ಹೇಳಬೇಡಿ, ಯಾರಾದರೂ ನೀವು ಯಾರು ಎಂದು ಕೇಳಿದರೆ ನೀವು ಭಾರತೀಯರು ಎಂದಷ್ಟೇ ಹೇಳಿ ಎಂಬುದನ್ನು ಪ್ರತಿಪಾದಿಸಿದರು.
ಅಕ್ರಾಳ, ವಿಕ್ರಾಳ, ಕರಾಳ… ಹೈರಾಣ ಈ ಬಾರಿಯೂ ಹಂಗೆ… ಇರ್ತಾವ ಎಂದ ಅವರು ಇದು ಹೆಸರೇ ಹೇಳಿದಂತೆ ಪರಾಭವ ನಾಮ ಸಂವತ್ಸರ. ಅಂದರೆ ಸೋಲುವುದು, ಸದಾಶಿವನ ಸಲುವಾಗಿ ಸೋಲಿರಿ, ಆಗ ನೀವು ಎಲ್ಲ ಕಡೆ ಗೆಲುತ್ತಿರಿ ಎಂದರು…
ಚಹಾ ಮಾರುವವನು ಪ್ರಧಾನಿ ಯಾಗುತ್ತಾನೆ ಎಂದು ಅನೇಕ ವರ್ಷಗಳ ಹಿಂದಯೇ ಸೂಚ್ಯವಾಗಿ ನುಡಿದಿದ್ದ ಶ್ರೀಗಳ ಹೇಳಿಕೆ ಮೋದಿ ಪ್ರಧಾನಿಯಾದಾಗ ಸತ್ಯವಾಗಿದ್ದು ಸುಳ್ಳಲ್ಲ, ಹೀಗಾಗಿ ಸದಾಶಿವ ಮುತ್ಯಾನ ಭವಿಷ್ಯವಾಣಿಯನ್ನು ಜನರು ಕುತೂಹಲದಿಂದ ಕೇಳಿ ಅದರನ್ವಯ ತಾವು ಕಾರ್ಯ ಪ್ರವೃತ್ತರಾಗುತ್ತಾರೆ…
