gokak

ಗೋಕಾಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅನಾಹುತ: ಅಗ್ನಿ ಅವಘಡದಲ್ಲಿ ವ್ಯಕ್ತಿಗೆ ಗಂಭೀರ ಗಾಯ

Share

ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಗಂಗಾಧರ ಗುಡಗುಡಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಪ್ರಜ್ಞೆಯಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.

ಗೋಕಾಕ ನಗರದ ಲ್ಯಾಂಡ್‌ಮಾರ್ಕ್ ಸಮೀಪವಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಹಠಾತ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾಣಿಸಿಕೊಂಡು ಬೆಂಕಿ ಅತಿಕ್ರಮಿಸಿದ್ದು, ನೋಡನೋಡುತ್ತಿದ್ದಂತೆ ಇಡೀ ಮನೆಯನ್ನು ಆವರಿಸಿಕೊಂಡಿದೆ. ಬೆಂಕಿಯ ಜ್ವಾಲೆಗೆ ಸಿಲುಕಿದ ಗಂಗಾಧರ ಗುಡಗುಡಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವ ಜೊತೆಗೆ ಮನೆಯೊಳಗೆ ಸಿಲುಕಿದ್ದ ಗಾಯಾಳುವನ್ನು ಯಶಸ್ವಿಯಾಗಿ ಹೊರತೆಗೆದು ರಕ್ಷಿಸಿದ್ದಾರೆ.

ಸದ್ಯ ಗಾಯಾಳು ಗಂಗಾಧರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಗೋಕಾಕ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆಯಿಂದಾಗಿ ಬೆಂಕಿ ಪಕ್ಕದ ಮನೆಗಳಿಗೆ ಹರಡುವುದು ತಪ್ಪಿದಂತಾಗಿದೆ. ಈ ಸಂಬಂಧ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:

error: Content is protected !!