arrest

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವರ ಮೇಲೆ ಬೆಳಗಾವಿ ಪೊಲೀಸರ ದಾಳಿ: ಮೂವರ ವಿರುದ್ಧ ಕೇಸ್ ದಾಖಲು!

Share

ಬೆಳಗಾವಿ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವವರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಮಾರಿಹಾಳ ಮತ್ತು ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಕಾನೂನು ಉಲ್ಲಂಘಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮಾರಿಹಾಳ ಪೊಲೀಸ್ ಠಾಣೆಯ ಎಎಸ್‌ಐ ಆರ್.ಎಂ. ತಳವಾರ್ ನೇತೃತ್ವದ ತಂಡ ಮೋದಗಾ ಗ್ರಾಮದಲ್ಲಿ ದಾಳಿ ನಡೆಸಿ, ಸುಳೇಬಾವಿಯ ಗಣಪತಿ ಹೊಸಮನಿ ಎಂಬಾತನನ್ನು ಸಾರ್ವಜನಿಕ ಸ್ಥಳದಲ್ಲಿ ಮದ್ಯಸೇವನೆ ಮಾಡುತ್ತಿದ್ದಾಗ ಬಂಧಿಸಿದ್ದಾರೆ. ಮದ್ಯದ ಬಾಟಲಿ ಹಾಗೂ ಗ್ಲಾಸ್‌ಗಳನ್ನು ಜಪ್ತುಪಡಿಸಿಕೊಂಡು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇತ್ತ ಕಾಕತಿ ಠಾಣೆಯ ಪಿಎಸ್‌ಐಗಳಾದ ಮಂಜುನಾಥ ನಾಯಕ ಮತ್ತು ಮೃತ್ಯುಂಜಯ ಮಠದ ಅವರು ಭೂತರಾಮನಟ್ಟಿ ಮುಕ್ತಿಮಠದ ಬಳಿ ಪ್ರತ್ಯೇಕ ದಾಳಿ ನಡೆಸಿದ್ದಾರೆ. ಈ ವೇಳೆ ಹೊಸ ವಂಟಮುರಿಯ ಕಾಡಪ್ಪ ವಾಲೀಕರ ಹಾಗೂ ಉಕ್ಕಡದ ದುರ್ಗಪ್ಪ ನಾಯಕ ಎಂಬುವವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ ಎಂಬ ಅರಿವಿದ್ದರೂ ಕಾನೂನು ಉಲ್ಲಂಘಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಳಗಾವಿ ನಗರ ಪೊಲೀಸರು ಮುಂದಾಗಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ. ನಗರದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:

error: Content is protected !!