ಕಾಗವಾಡ-ವಿಜಯಪುರ ರಾಜ್ಯ ಹೆದ್ದಾರಿಯ ಕಾಗವಾಡ ಸಮೀಪವಿರುವ, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದ ‘ಹೋಟೆಲ್ ತ್ರಿಫಲ’ಕ್ಕೆ ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಸಿಲಿಂಡರ್ ವಿತರಣೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುತ್ತಿದ್ದು, ಹೋಟೆಲ್ ಸೇವೆಯಲ್ಲಿ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಭಾಗದಲ್ಲಿರುವ ಈ ಹೋಟೆಲ್ ತ್ರಿಫಲ ಅತ್ಯಂತ ಪ್ರಸಿದ್ಧಿಯಾಗಿದ್ದು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಜಿತ್ ಚೌಗುಲೆ ಅವರ ಸಾರಥ್ಯದಲ್ಲಿ ಹಾಗೂ ಪ್ರಶಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಆದರೆ ಆಹಾರ ಇಲಾಖೆಯಿಂದ ಪೂರೈಕೆಯಾಗುವ ಗ್ಯಾಸ್ ಸಿಲಿಂಡರ್ಗಳು ಸಕಾಲಕ್ಕೆ ಸಿಗದೇ ಇರುವುದರಿಂದ, ಪ್ರಸ್ತುತ ಗ್ರಾಹಕರಿಗೆ ಉಪಾಹಾರದಲ್ಲಿ ಕೇವಲ ಇಡ್ಲಿಯನ್ನು ಮಾತ್ರ ನೀಡಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಆಹಾರ ಇಲಾಖೆಯ ಅಧಿಕಾರಿಗಳು ಎರಡು ದಿನಕ್ಕೆ ಕೇವಲ ಒಂದು ಸಿಲಿಂಡರ್ ನೀಡುತ್ತಿದ್ದಾರೆ. ಆದರೆ ಹೋಟೆಲ್ನ ದೈನಂದಿನ ಬಳಕೆಗೆ ಕನಿಷ್ಠ ಎರಡು ಸಿಲಿಂಡರ್ಗಳ ಅವಶ್ಯಕತೆಯಿದೆ. ಹೀಗೆ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗುತ್ತಿರುವುದರಿಂದ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅನಿವಾರ್ಯವಾಗಿ ಸೌದೆ ಒಲೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಹೋಟೆಲ್ ಕಾರ್ಮಿಕರು ಇಡೀ ದಿನ ಉರಿಬಿಸಿಲಿನಲ್ಲಿ ಸೌದೆ ಒಲೆಯ ಮುಂದೆ ಕೆಲಸ ಮಾಡುವಂತಾಗಿದೆ. ಇದೇ ರೀತಿ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದರೆ ಹೋಟೆಲ್ ಬಂದ್ ಮಾಡಬೇಕಾಗುತ್ತದೆ ಎಂದು ಪ್ರಶಾಂತ್ ಶೆಟ್ಟಿ ಅವರು ಬೇಸರದಿಂದ ತಿಳಿಸಿದ್ದಾರೆ. ಆದ್ದರಿಂದ ಬೆಳಗಾವಿ ಜಿಲ್ಲಾಧಿಕಾರಿಗಳು ಈ ಅವ್ಯವಸ್ಥೆಯ ಬಗ್ಗೆ ಗಮನಹರಿಸಿ, ಕೂಡಲೇ ಸ್ಥಳೀಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಹಾಗೂ ಪ್ರವಾಸೋದ್ಯಮ ಇಲಾಖೆಯ ಮಾನ್ಯತೆ ಪಡೆದ ಈ ಹೋಟೆಲ್ಗೆ ಸಮರ್ಪಕವಾಗಿ ಸಿಲಿಂಡರ್ ಪೂರೈಸುವ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
