Bagalkot

ಬಾಗಲಕೋಟೆ ಬೈ ಎಲೆಕ್ಷನ್ : ಮೇಟಿ ಕುಟುಂಬದ ಅಸಮಾಧಾನ ಶಮನ; ಉಮೇಶ್‌ಗೆ ಒಲಿದ ಲಕ್!

Share

ಬಾಗಲಕೋಟೆ ಉಪಚುನಾವಣೆಯ ಅಖಾಡದಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿದ್ದ ಮೇಟಿ ಕುಟುಂಬದ ಟಿಕೆಟ್ ಫೈಟ್ ಅಂತಿಮ ಹಂತಕ್ಕೆ ತಲುಪಿದೆ. ತೀವ್ರ ಪೈಪೋಟಿ ಮತ್ತು ಬಂಡಾಯದ ಎಚ್ಚರಿಕೆಯ ನಡುವೆಯೂ ಹೈಕಮಾಂಡ್ ಉಮೇಶ್ ಮೇಟಿಗೆ ಮಣೆ ಹಾಕಿದ್ದು, ಕುಟುಂಬದೊಳಗಿನ ಹಗ್ಗಜಗ್ಗಾಟಕ್ಕೆ ಸದ್ಯ ತೆರೆಬಿದ್ದಂತಿದೆ.

ಎಚ್.ವೈ. ಮೇಟಿ ಅವರ ಉತ್ತರಾಧಿಕಾರಕ್ಕಾಗಿ ಕುಟುಂಬದೊಳಗೆ ನಡೆದಿದ್ದ ಶೀತಲ ಸಮರಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮೇಟಿಯವರ ನಾಲ್ವರು ಮಕ್ಕಳ ಪೈಕಿ ಮಲ್ಲಿಕಾರ್ಜುನ, ಉಮೇಶ್ ಮತ್ತು ಪುತ್ರಿ ಮಹಾದೇವಿ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ವಿಶೇಷವಾಗಿ ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡಿದರೆ ಬಂಡಾಯ ಸ್ಪರ್ಧೆ ಮಾಡುವುದಾಗಿ ಮಹಾದೇವಿ ಮೇಟಿ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಕ್ಷೇತ್ರದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ಹೆಚ್ಚಾಗಿದೆ ಎಂದು ಮೇಟಿ ಆಪ್ತ ಹೊಳಬಸು ಶೆಟ್ಟರ್ ವಿರುದ್ಧ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳು ಪಕ್ಷಕ್ಕೆ ಮುಜುಗರ ತಂದಿದ್ದವು.

ಕೊನೆಗೂ ಕ್ಷೇತ್ರದ ಪ್ರಭಾವಿ ಮುಖಂಡರ ಅಭಿಪ್ರಾಯ ಮತ್ತು ಆಂತರಿಕ ಸರ್ವೆ ವರದಿಗಳನ್ನು ಆಧರಿಸಿ, ಹಿರಿಯರು ಉಮೇಶ್ ಮೇಟಿ ಹೆಸರನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ. ಉಮೇಶ್ ಅವರಿಗೆ ಟಿಕೆಟ್ ಫಿಕ್ಸ್ ಆಗುತ್ತಿದ್ದಂತೆಯೇ ಬಂಡಾಯದ ಬಾವುಟ ಹಾರಿಸಿದ್ದ ಮಹಾದೇವಿ ಮೇಟಿ ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಈ ನಿರ್ಧಾರದಿಂದ ಮೇಟಿ ಕುಟುಂಬದ ಅಸಮಾಧಾನ ಬಹುತೇಕ ಶಮನಗೊಂಡಿದ್ದು, ಕಾರ್ಯಕರ್ತರಲ್ಲಿದ್ದ ಎರಡು ಗುಂಪುಗಳು ಈಗ ಒಂದಾಗುವ ಅನಿವಾರ್ಯತೆ ಎದುರಾಗಿದೆ. ಈ ಬೆಳವಣಿಗೆಯು ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.

Tags:

error: Content is protected !!