ಆಂಧ್ರ ಪ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಸ್ವಗ್ರಾಮಕ್ಕೆ ಸರಕಾರಿ ಬಸ್ ಮೂಲಕ ಬರುವ ಸಂದರ್ಭದಲ್ಲಿ ಯಕ್ಸಂಬಾ ಪಟ್ಟಣದ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟಣೆ ನಡೆದಿದೆ.
ಗಿರಿಜಾ ಭೀಮರಾವ ಬಾವಚೆ(66) ಎಂಬುವರೆ ಮೃತಪಟ್ಟ ಮಹಿಳೆ. ಶ್ರೀಶೈಲಂಗೆ ಸರ್ಕಾರಿ ವಿಶೇಷ ಬಸ್‌ನಲ್ಲಿ ಅನೇಕ ಭಕ್ತರೊಂದಿಗೆ ದರ್ಶನ ಪಡೆಯಲು ಹೋಗಿದ್ದರು. ದರ್ಶನ ಪಡೆದು ಮನೆಗೆ ಹಿಂದಿರುಗುತ್ತಿದ್ದಾಗ ಶುಕ್ರವಾರ ಬೆಳಿಗ್ಗೆ ಶ್ರೀಶೈಲಂ ಬಳಿಯ ನಂದ್ಯಾಳನಲ್ಲಿ ಸ್ನಾನಕ್ಕಾಗಿ ಬಸ್ ನಿಲ್ಲಿಸಿದ ಸಂದರ್ಭದಲ್ಲಿ ಶೌಚಾಲಯಕ್ಕೆ ಹೋಗುತ್ತಿದ್ದಾಗ ಕುಸಿದು ಬಿದ್ದರು. ಬಸ್‌ನಲ್ಲಿದ್ದ ಗ್ರಾಮದ ಭಕ್ತರು ತಕ್ಷಣ ಅವರನ್ನು ರಿಕ್ಷಾದ ಸಹಾಯದಿಂದ ಸ್ವಲ್ಪ ದೂರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಗಿರಿಜಾ ಅವರ ಶವವನ್ನು ಆಂಬ್ಯುಲೆನ್ಸ್ ಮೂಲಕ ಪಟ್ಟಣಕ್ಕೆ ತರಲಾಯಿತು. ಶನಿವಾರ ಬೆಳಿಗ್ಗೆ ಅಂತ್ಯಕ್ರಿಯೆ ಮಾಡಲಾಯಿತು. ಕಳೆದ 16ರಂದು ಪಟ್ಟಣದ ಮೂವರು ಭಕ್ತರು ಶ್ರೀಶೈಲಂನಿಂದ ಹಿಂತಿರುಗುತ್ತಿದ್ದಾಗ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆ ಘಟನೆ ಮಾಸುವ ಮುನ್ನವೆ ಮತ್ತೊಂದು ದುರಂತ ನಡೆದಿದ್ದರಿಂದ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗವಿದೆ.
