Bagalkot

ಬಾಗಲಕೋಟೆ ಉಪಸಮರ ಫಿಕ್ಸ್: ಉಮೇಶ್ ಮೇಟಿ ವರ್ಸಸ್ ವೀರಣ್ಣ ಚರಂತಿಮಠ; ನಾಳೆ ನಾಮಪತ್ರ ಸಲ್ಲಿಕೆ ಪರ್ವ!

Share

ಬಾಗಲಕೋಟೆ ಉಪಚುನಾವಣೆಯ ಅಖಾಡ ಈಗ ಕಾವೇರಿದೆ. ಕಾಂಗ್ರೆಸ್‌ನಿಂದ ಉಮೇಶ್ ಮೇಟಿ ಮತ್ತು ಬಿಜೆಪಿಯಿಂದ ವೀರಣ್ಣ ಚರಂತಿಮಠ ಅಂತಿಮವಾಗಿದ್ದು, ನಾಳೆ ಸೋಮವಾರ ಇಬ್ಬರೂ ದಿಗ್ಗಜ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಶಕ್ತಿ ಪ್ರದರ್ಶನದ ಮೂಲಕ ಎರಡು ಪಕ್ಷಗಳು ಅಖಾಡಕ್ಕೆ ಧುಮುಕಲಿವೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇಶ್ ಮೇಟಿ ಹೆಸರು ಅಂತಿಮಗೊಂಡಿದ್ದು, ಈಗಾಗಲೇ ಅವರಿಗೆ ‘ಬಿ’ ಫಾರಂ ರವಾನೆಯಾಗಿದೆ. ಮಾರ್ಚ್ 23 ಸೋಮವಾರದಂದು ಉಮೇಶ್ ಮೇಟಿ ಅವರು ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಹಾಗೂ ತಿಮ್ಮಾಪುರ ಸೇರಿದಂತೆ ರಾಜ್ಯದ ಘಟಾನುಘಟಿ ನಾಯಕರು ಆಗಮಿಸುತ್ತಿದ್ದಾರೆ. ಕುಟುಂಬದ ಅಸಮಾಧಾನ ಶಮನವಾದ ಬೆನ್ನಲ್ಲೇ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ.

ಇತ್ತ ಬಿಜೆಪಿಯಲ್ಲೂ ಚುನಾವಣಾ ಚಟುವಟಿಕೆಗಳು ಗರಿಗೆದರಿದ್ದು, ಅನುಭವಿ ನಾಯಕ ವೀರಣ್ಣ ಚರಂತಿಮಠ ಅವರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಹಳೆಯ ಬಾಗಲಕೋಟೆಯ ಬವಿವಿ ಸಂಘದಿಂದ ಬೃಹತ್ ರೋಡ್ ಶೋ ಆರಂಭವಾಗಲಿದ್ದು, ಬಸವೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ಪ್ರಮುಖ ನಾಯಕರು ಪಾಲ್ಗೊಂಡು ಮತಬೇಟೆ ನಡೆಸಲಿದ್ದಾರೆ. ಎರಡೂ ಪಕ್ಷಗಳು ನಾಳೆಯ ನಾಮಪತ್ರ ಸಲ್ಲಿಕೆಯನ್ನೇ ದೊಡ್ಡ ಶಕ್ತಿ ಪ್ರದರ್ಶನವನ್ನಾಗಿ ಬಳಸಿಕೊಳ್ಳಲು ಸಜ್ಜಾಗಿವೆ.

Tags:

error: Content is protected !!