BGM JUDO
ಬೆಳಗಾವಿಯ ಪ್ರತಿಭಾವಂತ ಜೂಡೋ ಆಟಗಾರ್ತಿ ರಾಧಿಕಾ ಡುಕರೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಚಂಡೀಗಢದಲ್ಲಿ ನಡೆದ ಪ್ರತಿಷ್ಠಿತ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಜೂಡೋ ಚಾಂಪಿಯನ್ಶಿಪ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಇವರು ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಧಾಮಣೆ ಗ್ರಾಮದ ನಿವಾಸಿಯಾದ ರಾಧಿಕಾ ಡು ಕರೆ, ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 18ರಿಂದ 22ರವರೆಗೆ ನಡೆದ ರಾಷ್ಟ್ರೀಯ ಜೂಡೋ ಚಾಂಪಿಯನ್ಶಿಪ್ನ 70 ಕೆ.ಜಿ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ. ಟೂರ್ನಿಯುದ್ದಕ್ಕೂ ಅದ್ಭುತ ತಂತ್ರಗಾರಿಕೆ ಪ್ರದರ್ಶಿಸಿದ ಇವರು, ಪಂಜಾಬ್ನ ಕಿರಣ್ ದೀಪ್ ಕೌರ್, ಹರಿಯಾಣದ ಕೋಮಲ್ ಹಾಗೂ ಕ್ವಾರ್ಟರ್ ಫೈನಲ್ನಲ್ಲಿ ಗುಜರಾತ್ನ ರಿತುಬೆನ್ ವಾಜಾ ವಿರುದ್ಧ ‘ಇಪ್ಪಾನ್’ ಮೂಲಕ ಭರ್ಜರಿ ಜಯ ಸಾಧಿಸಿದರು. ಸೆಮಿಫೈನಲ್ನಲ್ಲಿ ಆತಿಥೇಯ ಚಂಡೀಗಢದ ಖುಷಿ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ರಾಧಿಕಾ, ಅಂತಿಮ ಪಂದ್ಯದಲ್ಲಿ ಎಲ್ಎನ್ಐಪಿ ವಿಶ್ವವಿದ್ಯಾಲಯದ ಚಾನು ವಿರುದ್ಧ ವೀರಾವೇಶದ ಹೋರಾಟ ನೀಡಿ ಅಲ್ಪ ಅಂತರದಲ್ಲಿ ಸೋಲೊಪ್ಪುವ ಮೂಲಕ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ.
ಪ್ರಸ್ತುತ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಎನ್ಐಎಸ್ ತರಬೇತುದಾರರಾದ ರೋಹಿಣಿ ಪಾಟೀಲ್ ಮತ್ತು ಕುತುಜಾ ಮುಲ್ತಾನಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ರಾಧಿಕಾ ಅವರ ಈ ಯಶಸ್ಸಿಗೆ ಉಪನಿರ್ದೇಶಕ ಶ್ರೀನಿವಾಸ ಬಿ. ಅವರ ಬೆಂಬಲ ಹಾಗೂ ವೈಯಕ್ತಿಕ ಪರಿಶ್ರಮ ಕಾರಣವಾಗಿದೆ. ಈ ಸಾಧನೆಯು ಧಾಮಣೆ ಗ್ರಾಮ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಅಪಾರ ಗೌರವ ತಂದಿದ್ದು, ಬೆಳಗಾವಿ ಭಾಗದಲ್ಲಿ ಜೂಡೋ ಕ್ರೀಡೆಯ ಭವಿಷ್ಯಕ್ಕೆ ಹೊಸ ಭರವಸೆ ನೀಡಿದೆ.
