ಅನಾರೋಗ್ಯ ಹಾಗೂ ಮಾನಸಿಕ ಅಸ್ವಸ್ಥತೆಯಿಂದಾಗಿ ರಸ್ತೆ ಬದಿಯ ಹೊಲದಲ್ಲಿ ಅಸಹಾಯಕರಾಗಿ ಬಿದ್ದಿದ್ದ ವೃದ್ಧರೊಬ್ಬರನ್ನು ರೈತರು ರಕ್ಷಿಸಿದ ಘಟನೆ ಬೆಳಗಾವಿಯ ಯೆಳ್ಳೂರು ರಸ್ತೆಯಲ್ಲಿ ನಡೆದಿದೆ. ಹಸಿವಿನಿಂದ ಕಂಗಾಲಾಗಿದ್ದ ವೃದ್ಧನಿಗೆ ಅನ್ನ ನೀಡಿ, ಪೊಲೀಸರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸುವ ಮೂಲಕ ರೈತರು ಸಾಕ್ಷಾತ್ ದೇವರಂತಾಗಿದ್ದಾರೆ.
ವಡಗಾವ ಸರಾಫ್ ಗಲ್ಲಿಯ ನಿವಾಸಿ ಎಂದು ಗುರುತಿಸಲಾದ 70 ವರ್ಷದ ಪ್ರಕಾಶ್ ಖಾಂಡೇಕರ್ ಎಂಬ ವೃದ್ಧರು, ಕಳೆದ ಎರಡು ದಿನಗಳಿಂದ ಯೆಳ್ಳೂರು ರಸ್ತೆಯ ಹೊಲವೊಂದರಲ್ಲಿ ಆಹಾರ, ನೀರಿಲ್ಲದೆ ಬಿದ್ದಿದ್ದರು. ಮಾನಸಿಕ ಸ್ಥಿತಿ ಹದಗೆಟ್ಟಿದ್ದಲ್ಲದೆ, ಕಾಲಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಎದ್ದು ನಡೆಯಲಾಗದ ಸ್ಥಿತಿಯಲ್ಲಿದ್ದರು. ಇಂದು ಬೆಳಿಗ್ಗೆ ಇದನ್ನು ಗಮನಿಸಿದ ರೈತ ಮುಖಂಡ ರಾಜು ಮರವೆ ಹಾಗೂ ಇತರ ರೈತರು, ಕೂಡಲೇ ವೃದ್ಧನ ಬಳಿ ಧಾವಿಸಿ ಅವರ ವಿಚಾರಣೆ ನಡೆಸಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಅವರಿಗೆ ಆಹಾರದ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇದೇ ವೇಳೆ ಗಸ್ತಿನಲ್ಲಿದ್ದ ವಡಗಾವ ಗ್ರಾಮೀಣ ಪೊಲೀಸರಿಗೆ ರೈತರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಹಾಗೂ ರೈತರು ಸೇರಿ 108 ಅಂಬುಲೆನ್ಸ್ ಕರೆಸಿದ್ದಾರೆ. ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಅತ್ಯಂತ ಕಾಳಜಿಯಿಂದ ಅಂಬುಲೆನ್ಸ್ಗೆ ಹತ್ತಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ರೈತರು ಮತ್ತು ಪೊಲೀಸರ ಈ ತುರ್ತು ಸ್ಪಂದನೆಯಿಂದಾಗಿ ಅಸಹಾಯಕ ವೃದ್ಧನ ಜೀವ ಉಳಿದಂತಾಗಿದ್ದು, ಸಾರ್ವಜನಿಕ ವಲಯದಲ್ಲಿ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
