BELAGAVI

ಬೆಳಗಾವಿಯಲ್ಲಿ ಕಮರ್ಷಿಯಲ್ ಗ್ಯಾಸ್ ಕೊರತೆ: ಸೌದೆ ಒಲೆ ಪಾಲಾದ ಖಾನಾವಳಿಗಳು, ರೊಟ್ಟಿ ಊಟ ಸ್ಥಗಿತ!

Share

ಕುಂದಾನಗರಿ ಬೆಳಗಾವಿಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಅಭಾವ ತೀವ್ರಗೊಂಡಿದ್ದು, ನಗರದ ಮೆಸ್ ಹಾಗೂ ಖಾನಾವಳಿಗಳ ಮಾಲೀಕರು ಕಂಗಾಲಾಗಿದ್ದಾರೆ. ಗ್ಯಾಸ್ ಸಿಗದ ಕಾರಣ ಅನಿವಾರ್ಯವಾಗಿ ಸೌದೆ ಒಲೆಗಳ ಮೊರೆ ಹೋಗಿರುವ ಮಾಲೀಕರು, ಹೈರಾಣಾಗಿ ಹೋಗಿದ್ದಾರೆ.

:ಬೆಳಗಾವಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ನಗರದ ಪ್ರಸಿದ್ಧ ಖಾನಾವಳಿಗಳು ಮತ್ತು ವಿದ್ಯಾರ್ಥಿಗಳ ಮೆಸ್‌ಗಳು ಅಡುಗೆ ಮಾಡಲು ಪರದಾಡುವಂತಾಗಿದೆ. ನಗರದ ಬಡಕಲ್ ಗಲ್ಲಿಯಲ್ಲಿರುವ ದುರ್ಗಾದೇವಿ ಖಾನಾವಳಿಯಲ್ಲಿ ಸಿಲಿಂಡರ್ ಇಲ್ಲದ ಕಾರಣ ಸೌದೆ ಒಲೆ ಹಚ್ಚಿ ಅಡುಗೆ ಮಾಡಲಾಗುತ್ತಿದೆ. ನಿತ್ಯದ ಗ್ರಾಹಕರು ಹಾಗೂ ವಿದ್ಯಾರ್ಥಿಗಳಿಗೆ ಹಸಿವು ನೀಗಿಸಬೇಕಾದ ಅನಿವಾರ್ಯತೆ ಇರುವುದರಿಂದ, ಮಾಲೀಕರು ಸೌದೆ ಬಳಸಿ ಅಡುಗೆ ತಯಾರಿಸುತ್ತಿದ್ದಾರೆ.ಸೌದೆ ಒಲೆಯ ಬಳಕೆಯಿಂದ ಖಾನಾವಳಿ ಮಾಲೀಕರಿಗೆ ಆರ್ಥಿಕ ಹೊರೆ ದುಪ್ಪಟ್ಟಾಗಿದೆ. ಪ್ರಸ್ತುತ ಒಂದು ಕೆಜಿ ಕಟ್ಟಿಗೆಗೆ 9 ರೂಪಾಯಿ ವೆಚ್ಚವಾಗುತ್ತಿದ್ದು, ಒಂದು ದಿನಕ್ಕೆ ಸುಮಾರು 25 ಕೆಜಿಗೂ ಹೆಚ್ಚು ಕಟ್ಟಿಗೆ ಬೇಕಾಗುತ್ತಿದೆ. ಇದರಿಂದ ಲಾಭಾಂಶಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದ್ದರೂ, ಗ್ರಾಹಕರ ಹಿತದೃಷ್ಟಿಯಿಂದ ಊಟದ ದರವನ್ನು ಏರಿಕೆ ಮಾಡದೆ ಹಳೆ ದರದಲ್ಲೇ ಸೇವೆ ನೀಡಲಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಆದರೆ ಸೌದೆ ಒಲೆಯ ಮೇಲೆ ಬಿಸಿ ಬಿಸಿ ರೊಟ್ಟಿ ತಯಾರಿಸುವುದು ಸವಾಲಿನ ಕೆಲಸವಾಗಿರುವುದರಿಂದ, ಸದ್ಯಕ್ಕೆ ರೊಟ್ಟಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಅನಿಲ ಪೂರೈಕೆದಾರರ ವಿಳಂಬ ಧೋರಣೆಯಿಂದಾಗಿ ಸಣ್ಣ ಪುಟ್ಟ ಹೋಟೆಲ್‌ಗಳು ಮತ್ತು ಖಾನಾವಳಿಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಕಮರ್ಷಿಯಲ್ ಸಿಲಿಂಡರ್ ಕೊರತೆ ಹೀಗೆಯೇ ಮುಂದುವರಿದರೆ ಹೊರಗಿನ ಊಟವನ್ನೇ ನಂಬಿಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ, ಗ್ಯಾಸ್ ಪೂರೈಕೆಯನ್ನು ಸುಗಮಗೊಳಿಸಬೇಕು ಎಂದು ಖಾನಾವಳಿ ಮಾಲೀಕರು ತೀವ್ರವಾಗಿ ಆಗ್ರಹಿಸಿದ್ದಾರೆ.

Tags:

error: Content is protected !!