ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಟಿಕೆಟ್ ಕಗ್ಗಂಟು ಅಂತಿಮ ಘಟ್ಟಕ್ಕೆ ತಲುಪಿದೆ. ಸಚಿವ ಸತೀಶ್ ಜಾರಕಿಹೊಳಿ ನಡೆಸಿದ ದಿಢೀರ್ ರಾಜತಾಂತ್ರಿಕ ನಡೆಗಳು ಕ್ಷೇತ್ರದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಕೈ ಪಾಳಯದ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಬಾಗಲಕೋಟೆ ಉಪಚುನಾವಣೆಯ ಅಖಾಡ ಸದ್ಯ ಹೈವೋಲ್ಟೇಜ್ ಡ್ರಾಮಾಗೆ ಸಾಕ್ಷಿಯಾಗಿದೆ. ದಿವಂಗತ ಎಚ್.ವೈ.ಮೇಟಿ ಅವರ ಉತ್ತರಾಧಿಕಾರಿ ಯಾರಾಗಬೇಕು ಎನ್ನುವ ಗೊಂದಲದ ನಡುವೆಯೇ, ಚುನಾವಣಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಉಮೇಶ್ ಮೇಟಿಗೆ ದಿಢೀರ್ ಬುಲಾವಾ ನೀಡಿ ಗೋಕಾಕ್‌ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್ ನೀಡಿದರೆ ಉಂಟಾಗಬಹುದಾದ ಬಂಡಾಯದ ಭೀತಿಯನ್ನು ಶಮನಗೊಳಿಸಲು ‘ಸಾಹುಕಾರ್’ ಪ್ಲಾನ್ ಮಾಡಿದ್ದು, ಕುಟುಂಬದ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದೆಡೆ, ಕುಟುಂಬದ ಆಕಾಂಕ್ಷಿಗಳ ಪೈಕಿ ರಮೇಶ್ ಮೇಟಿ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಹೈಕಮಾಂಡ್ ಅಧಿಕೃತ ಮುದ್ರೆ ಒತ್ತೋದು ಮಾತ್ರ ಬಾಕಿ ಉಳಿದಿದೆ. ಒಂದು ವೇಳೆ ಉಮೇಶ್ ಮೇಟಿಗೆ ಅವಕಾಶ ಸಿಕ್ಕರೆ ಮಹಾದೇವಿ ಮೇಟಿ ಅವರು ಬೆಂಬಲ ಸೂಚಿಸಲು ಒಪ್ಪಿರುವುದು ಸದ್ಯದ ಬಿಕ್ಕಟ್ಟನ್ನು ಕೊಂಚ ತಿಳಿಗೊಳಿಸಿದೆ.
ಒಟ್ಟಾರೆಯಾಗಿ, ಜಾರಕಿಹೊಳಿ ಟೀಮ್ ಅಲರ್ಟ್ ಆಗಿದ್ದು, ಬಂಡಾಯದ ಬೇಗುದಿ ಆರಿಸಲು ಹೈಕಮಾಂಡ್ ಯಾವ ತಂತ್ರ ಹೂಡಲಿದೆ ಎಂಬುದು ಇಡೀ ಜಿಲ್ಲೆಯ ಕುತೂಹಲಕ್ಕೆ ಕಾರಣವಾಗಿದೆ.
