BELAGAVI

ದಿವಂಗತ ದೀಪಕ್ ದಳವಿ ನಿವಾಸಕ್ಕೆ ಸಂಸದ ಜಯಂತ್ ಪಾಟೀಲ್ ಭೇಟಿ: ಗಡಿ ಹೋರಾಟಗಾರನ ಕುಟುಂಬಕ್ಕೆ ಸಾಂತ್ವನ

Share

ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ದಿವಂಗತ ದೀಪಕ್ ದಳವಿ ಅವರ ನಿಧನದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಪಾಟೀಲ್ ಅವರು ಇಂದು ಬೆಳಗಾವಿಯ ದಳವಿ ನಿವಾಸಕ್ಕೆ ಭೇಟಿ ನೀಡಿದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ದಳವಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿದರು.

ಗಡಿ ಭಾಗದ ಹಿರಿಯ ಹೋರಾಟಗಾರ ಹಾಗೂ ಎಂಇಎಸ್ ಅಧ್ಯಕ್ಷರಾಗಿದ್ದ ದೀಪಕ್ ದಳವಿ ಅವರು ಕಳೆದ ಮಂಗಳವಾರ ತಮ್ಮ 84ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಅವರ ಅಗಲಿಕೆಯ ಸುದ್ದಿ ಕೇಳಿ ಗಡಿ ಭಾಗದಲ್ಲಿ ಶೋಕದ ಛಾಯೆ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ದಳವಿ ಅವರ ಆಪ್ತರಾಗಿದ್ದ ಸಂಸದ ಜಯಂತ್ ಪಾಟೀಲ್ ಅವರು ಇಂದು ಶುಕ್ರವಾರ ನೇರವಾಗಿ ಬೆಳಗಾವಿಯ ಟಿಳಕವಾಡಿಯ ಸಾವರ್ಕರ್ ರಸ್ತೆಯಲ್ಲಿರುವ ಅವರ ಮನೆಗೆ ಆಗಮಿಸಿದರು. ದಳವಿ ಅವರ ಪುತ್ರ ಬುಲಂದ್ ದಳವಿ ಮತ್ತು ಕುಟುಂಬದ ಇತರ ಸದಸ್ಯರನ್ನು ಭೇಟಿ ಮಾಡಿದ ಪಾಟೀಲ್, ಅವರ ಆರೋಗ್ಯ ಮತ್ತು ದಳವಿ ಅವರ ಕೊನೆಯ ಕ್ಷಣಗಳ ಬಗ್ಗೆ ಮಾಹಿತಿ ಪಡೆದು ಧೈರ್ಯ ತುಂಬಿದರು.

ಇದೇ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಮುಖ ನಾಯಕರಾದ ಮನೋಹರ ಕಿಣೇಕರ, ಮಾಲೋಜಿರಾವ್ ಅಷ್ಟೇಕರ ಸೇರಿದಂತೆ ಹಲವು ಪದಾಧಿಕಾರಿಗಳೊಂದಿಗೆ ಜಯಂತ್ ಪಾಟೀಲ್ ಚರ್ಚೆ ನಡೆಸಿದರು. ಗಡಿ ಭಾಗದ ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಪಡೆದ ಅವರು, ಮುಂಬರುವ ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಸಮಿತಿಯ ನಿಯೋಗಕ್ಕೆ ಮುಖ್ಯಮಂತ್ರಿಗಳ ಭೇಟಿ ಏರ್ಪಡಿಸುವುದಾಗಿ ಭರವಸೆ ನೀಡಿದರು. ಈ ಭೇಟಿಯ ಸಂದರ್ಭದಲ್ಲಿ ಎಂಇಎಸ್‌ನ ಹಿರಿಯ ಹಾಗೂ ಯುವ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!