Bagalkot

ವರುಣನ ಆರ್ಭಟದ ನಡುವೆ ಶ್ರೀ ಮಾರುತೇಶ್ವರನ ರಥೋತ್ಸವ: ಆಲಿಕಲ್ಲು ಮಳೆಯಲ್ಲೇ ರಥ ಎಳೆದು ಭಕ್ತಿ ಮೆರೆದ ಸಾವಿರಾರು ಭಕ್ತರು!

Share

ಭಕ್ತನ ಭಕ್ತಿಗೆ ಭಗವಂತ ಒಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ, ಆದರೆ ಇಂದು ಬಾಗಲಕೋಟೆಯಲ್ಲಿ ಭಕ್ತರ ಭಕ್ತಿ ಕಂಡು ಸಾಕ್ಷಾತ್ ವರುಣದೇವನೇ ಧರೆಗಿಳಿದು ಬಂದಂತಿದೆ. ಯುಗಾದಿ ಪಾಡ್ಯದ ಹಿನ್ನೆಲೆಯಲ್ಲಿ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದಲ್ಲಿ ನಡೆದ ಮಾರುತೇಶ್ವರ ರಥೋತ್ಸವಕ್ಕೆ ಆಲಿಕಲ್ಲು ಮಳೆ ಅಡ್ಡಿಯಾದರೂ, ಭಕ್ತರು ಮಾತ್ರ ರಥ ಎಳೆಯುವುದನ್ನು ಬಿಡಲಿಲ್ಲ. ಮಳೆಯಲ್ಲಿ ಮಿಂದೆದ್ದೇ ಮಾರುತೇಶ್ವರನಿಗೆ ಜೈಕಾರ ಹಾಕಿದ ಆ ಭಕ್ತಿ ಭಾವದ ದೃಶ್ಯಗಳು ಇಲ್ಲಿವೆ…

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮ ಇಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ಯುಗಾದಿ ಪಾಡ್ಯದ ನಿಮಿತ್ತ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತೇಶ್ವರನ ಅದ್ದೂರಿ ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಥೋತ್ಸವ ಆರಂಭವಾಗುತ್ತಿದ್ದಂತೆಯೇ ಆಕಾಶದಲ್ಲಿ ಮೋಡ ಕವಿದು ಆಲಿಕಲ್ಲು ಸಹಿತ ಭಾರಿ ಮಳೆ ಸುರಿಯಲಾರಂಭಿಸಿತು.

ಸಾಮಾನ್ಯವಾಗಿ ಮಳೆ ಬಂದರೆ ಜನ ಸುರಕ್ಷಿತ ಸ್ಥಳಕ್ಕೆ ಓಡುತ್ತಾರೆ. ಆದರೆ ಇಲ್ಲಿ ಮಾತ್ರ ದೃಶ್ಯವೇ ಬೇರೆಯಾಗಿತ್ತು. ಸುರಿಯುವ ಮಳೆಯನ್ನು ಲೆಕ್ಕಿಸದ ಭಕ್ತರು, ಮಾರುತೇಶ್ವರನ ಜಯಘೋಷ ಹಾಕುತ್ತಾ ರಥವನ್ನು ಎಳೆಯಲಾರಂಭಿಸಿದರು. ರಥದ ಗಾಲಿಗಳು ಉರುಳುತ್ತಿದ್ದಂತೆ ಮಳೆಯ ತೀವ್ರತೆ ಹೆಚ್ಚಾದರೂ, ಭಕ್ತರ ಉತ್ಸಾಹ ಮಾತ್ರ ಕುಗ್ಗಲಿಲ್ಲ. ನೂರಾರು ಭಕ್ತರು ಮಳೆಯಲ್ಲಿ ಸಂಪೂರ್ಣ ನೆನೆಯುತ್ತಲೇ ರಥೋತ್ಸವವನ್ನು ಯಶಸ್ವಿಗೊಳಿಸಿದರು.

ಈ ಜಾತ್ರೆಗೆ ಬಾಗಲಕೋಟೆ ಮಾತ್ರವಲ್ಲದೆ ನೆರೆಯ ಗದಗ ಮತ್ತು ವಿಜಯಪುರ ಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ರಥೋತ್ಸವ ಮುಗಿಯುವವರೆಗೂ ಮಳೆ ಸುರಿಯುತ್ತಿದ್ದರೂ, ಭಕ್ತರು ಮಳೆಯಲ್ಲೇ ಮಿಂದೆದ್ದು ತಮ್ಮ ಭಕ್ತಿ ಸಮರ್ಪಿಸಿದರು. ಹಬ್ಬದ ದಿನವೇ ವರುಣದೇವ ಪ್ರತ್ಯಕ್ಷನಾಗಿ ದೇವರಿಗೆ ಅಭಿಷೇಕ ಮಾಡಿದಂತೆ ಭಾಸವಾಗುತ್ತಿತ್ತು ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.

Tags:

error: Content is protected !!