ನಾಡಿನಾದ್ಯಂತ ಯುಗಾದಿ ಹಬ್ಬದ ಸಡಗರ ಮನೆಮಾಡಿದ್ದರೆ, ಇತ್ತ ಧಾರವಾಡದ ಅಮ್ಮಿನಭಾವಿಯಲ್ಲಿ ಮಾತ್ರ ರಕ್ತದ ಹೋಕುಳಿಯೇ ಹರಿದಿದೆ. ಆಸ್ತಿ ಎಂಬ ಹಪಾಹಪಿಗೆ ಬೆನ್ನು ಹಿಂದೆ ಹುಟ್ಟಿದ ತಂಗಿಯನ್ನೇ ಅಣ್ಣ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಜಮೀನಿನಲ್ಲಿ ಭೂಮಿ ಪೂಜೆ ಮಾಡಬೇಕಿದ್ದ ಕೈಗಳು, ಅದೇ ಜಮೀನಿನಲ್ಲಿ ತಂಗಿಯ ರಕ್ತ ಹರಿಸಿವೆ.
ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮ ಇಂದು ಬೆಳ್ಳಂಬೆಳಗ್ಗೆಯೇ ಘೋರ ಕೃತ್ಯಕ್ಕೆ ಸಾಕ್ಷಿಯಾಗಿದೆ. ಯುಗಾದಿ ಪಾಡ್ಯದ ಸಡಗರದಲ್ಲಿ ಇಡೀ ಗ್ರಾಮ ಮುಳುಗಿದ್ದರೆ, ಶಿವಲೀಲಾ ಸಂಗೊಳ್ಳಿ ಎಂಬ 35 ವರ್ಷದ ಮಹಿಳೆ ಮಾತ್ರ ತನ್ನದೇ ಅಣ್ಣನ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಹೌದು, ಕುಟುಂಬಕ್ಕೆ ಸೇರಿದ ಆರು ಎಕರೆ ಜಮೀನಿನ ಪಾಲಿಗಾಗಿ ನಡೆದ ಕಿತ್ತಾಟ ಇಂದು ಕೊಲೆಯಲ್ಲಿ ಅಂತ್ಯವಾಗಿದೆ.
ಮೃತ ದುರ್ದೈವಿ ಶಿವಲೀಲಾ ಹಾಗೂ ಆರೋಪಿ ಹಣಮಂತ ಯಲಿವಾಳ ಇಬ್ಬರೂ ಸಹೋದರ-ಸಹೋದರಿಯರು. ಕಳೆದ ಕೆಲವು ದಿನಗಳಿಂದ ಜಮೀನಿನ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ತೀವ್ರ ತಿಕ್ಕಾಟ ನಡೆಯುತ್ತಿತ್ತು. ಇಂದು ಯುಗಾದಿ ಪಾಡ್ಯದ ಅಂಗವಾಗಿ ಭೂಮಿ ಪೂಜೆ ಮಾಡಲು ಇಬ್ಬರೂ ಜಮೀನಿಗೆ ತೆರಳಿದ್ದರು. ಆದರೆ ಅಲ್ಲಿಯೂ ಜಮೀನಿನ ಪಾಲಿನ ವಿಚಾರ ಮುನ್ನೆಲೆಗೆ ಬಂದು ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ.
ತಂಗಿಯ ಮಾತಿನಿಂದ ಕೆರಳಿದ ಹಣಮಂತ, ತನ್ನ ಬಳಿಯಿದ್ದ ಮಾರಕಾಸ್ತ್ರಗಳಿಂದ ಶಿವಲೀಲಾ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಶಿವಲೀಲಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಹಬ್ಬದ ದಿನವೇ ಜಮೀನಿನಲ್ಲಿ ಈ ರಕ್ತಪಾತ ನಡೆದಿದ್ದು, ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಧಾರವಾಡ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಸದ್ಯ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹಣಮಂತನಿಗಾಗಿ ಶೋಧ ಮುಂದುವರಿದಿದೆ. ಹಬ್ಬದ ದಿನವೇ ಅಣ್ಣನಿಂದ ತಂಗಿಯ ಹತ್ಯೆಯಾಗಿರುವುದು ಅಮ್ಮಿನಭಾವಿ ಗ್ರಾಮದಲ್ಲಿ ಮೌನ ಆವರಿಸುವಂತೆ ಮಾಡಿದೆ.
