• ವಿಜಯಪುರ ಡಿಡಿಪಿಐ ತಂತ್ರಾಂಶ ಲಾಗಿನ್ ದುರ್ಬಳಕೆ
• ಗೊತ್ತಿಲ್ಲದಂತೆ ಶಾಲೆಗಳ ಮಾನ್ಯತೆಗೆ ಅಕ್ರಮ ಒಪ್ಪಿಗೆ
• ಸರ್ಕಾರದ ಡಿಜಿಟಲ್ ವ್ಯವಸ್ಥೆಗೆ ಕಿಡಿಗೇಡಿಗಳ ಕನ್ನ
• ತನಿಖೆಗೆ ಆಗ್ರಹಿಸಿ ಪೊಲೀಸರಿಗೆ ಡಿಡಿಪಿಐ ದೂರು
ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸರ್ಕಾರದ ತಂತ್ರಾಂಶ ದುರ್ಬಳಕೆ ಯಾಗಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಇಲಾಖೆ ಉಪ ನಿರ್ದೇಶಕರ ತಂತ್ರಾಂಶವನ್ನೇ ದುರ್ಬಳಕೆ ಮಾಡಿಕೊಂಡು ಶಾಲೆಗಳ ಮಾನ್ಯತೆ ನವೀಕರಣಗೊಳಿಸಲಾಗಿದೆ. ಡಿಡಿಪಿಐಗೆ ಗೊತ್ತಿಲ್ಲದಂತೆ ಅವರ ಲಾಗಿನ್ ವಿವರ, ಪಾಸ್ವರ್ಡ್ ದುರುಪಯೋಗ ಪಡಿಸಿಕೊಂಡು, ಸರ್ಕಾರದ ಡಿಜಿಟಲ್ ವ್ಯವಸ್ಥೆಗೆ ಅನಧಿಕೃತವಾಗಿ ಪ್ರವೇಶಿಸಿ ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಾನ್ಯತೆ ನವೀಕರಣ, ಪ್ರಥಮ ಮಾನ್ಯತೆ ಕುರಿತಂತೆ ಆನ್ಲೈನ್ ತಂತ್ರಾಂಶದಲ್ಲಿ ಒಪ್ಪಿಗೆ ನೀಡುವ ಹಾಗೂ ಮಂಜೂರು ಮಾಡುವ ಕಾರ್ಯ ಮಾಡಲಾಗಿದೆ. ಆದರೆ, ಡಿಡಿಪಿಐ ತಾವು ಅನುಮೋದನೆ ನೀಡಿಯೇ ಇಲ್ಲ, ಅಸಲಿಗೆ ತಮ್ಮ ಗಮನಕ್ಕೆ ಬಂದೇ ಇಲ್ಲವೆಂದು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಗಂಭೀರವಾದ ಅಧಿಕಾರ ದುರುಪಯೋಗದ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ನಂಬಿಕೆ ದ್ರೋಹ ಮಾಡಿದವರನ್ನು, ಆಡಳಿತಾತ್ಮಕವಾಗಿ ಅಕ್ರಮ ನಡೆಸಿದವರನ್ನು ಪತ್ತೆ ಹಚ್ಚುವಂತೆ ಫೆ. 25ರಂದೇ ಪೊಲೀಸರಿಗೆ ದೂರು ನೀಡಿದ್ದಾರೆ.
