Bailahongala

*ದೊಡವಾಡ ಹತ್ಯೆ ಪ್ರಕರಣ: ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು!*

Share

“ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ದೊಡವಾಡದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕ್ಷುಲ್ಲಕ ದಾರಿ ವಿವಾದಕ್ಕೆ ಸಂಬಂಧಿಕನನ್ನೇ ಕಟುಕನಂತೆ ಕೊಂದಿದ್ದ ಆರೋಪಿಯನ್ನು ಈಗ ಜೈಲಿಗಟ್ಟಲಾಗಿದೆ.

ದೊಡವಾಡ ಗ್ರಾಮದ ಕೊಪ್ಪ ಅಗಸಿಯ ನಿವಾಸಿ ಮಹೇಶ ಬಸಯ್ಯ ಉಪ್ಪನಿಮಠ ಎಂಬುವವರ ಭೀಕರ ಹತ್ಯೆ ಪ್ರಕರಣವನ್ನು ದೊಡವಾಡ ಪೊಲೀಸರು ಕೇವಲ ಒಂದೇ ದಿನದಲ್ಲಿ ಭೇದಿಸಿದ್ದಾರೆ. ಮೃತನ ಸಂಬಂಧಿಯೇ ಆದ ರುದ್ರಯ್ಯ ಬಸಯ್ಯ ಉಪ್ಪನಿಮಠ (36) ಎಂಬಾತನೇ ಈ ಕೃತ್ಯ ಎಸಗಿದ ಹಂತಕ. ಮನೆಯ ಮುಂದಿನ ದಾರಿ ವಿವಾದ ಹಾಗೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ. ದಿನಾಂಕ 17/03/2026 ರಂದು ಸಂಜೆ ಏಕಾಏಕಿ ಕುಡಗೋಲಿನಿಂದ ಮಹೇಶನ ಕುತ್ತಿಗೆಗೆ ಇರಿದು ರಕ್ತದ ಮಡುವಿನಲ್ಲಿ ಕೆಡವಿದ್ದ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿ, ಇಂದು (ಮಾರ್ಚ್ 18) ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಆರೋಪಿಯು ಮೊದಲಿನಿಂದಲೂ ದಾರಿ ವಿಚಾರವಾಗಿ ಮೃತನೊಂದಿಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಘಟನೆಯ ದಿನ ಚಿಕನ್ ಅಂಗಡಿ ಬಳಿ ನಡೆದ ಗಲಾಟೆಯಲ್ಲಿ ಮೃತ ಮಹೇಶ ಬುದ್ಧಿವಾದ ಹೇಳಿದ್ದಕ್ಕೆ ಕೆರಳಿದ ಆರೋಪಿ, ‘ನನ್ನ ಮೇಲೆಯೇ ಹಿರೇತನ ತೋರಿಸುತ್ತೀಯಾ?’ ಎಂದು ಆಕ್ರೋಶಗೊಂಡು ಹೊಂಚು ಹಾಕಿ ಈ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್‌ಐ ಹೆಚ್.ಕೆ. ಪಾಟೀಲ ನೇತೃತ್ವದ ತಂಡ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಪೊಲೀಸ್ ತಂಡದ ಈ ಶ್ಲಾಘನೀಯ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Tags:

error: Content is protected !!