ಕೊಲ್ಲಿ ರಾಷ್ಟ್ರಗಳ ಯುದ್ಧದಿಂದಾಗಿರಾಜ್ಯದಲ್ಲಿ ತಲೆದೋರಿರುವ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಸಮಸ್ಯೆ ವಾರದೊಳಗೆ ಸಹಜಸ್ಥಿತಿಗೆ ಬರಲಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್.
ಮುನಿಯಪ್ಪ ವಿಧಾನ ಪರಿಷತ್‌ನಲ್ಲಿ ಹೇಳಿದರು.
ಸದಸ್ಯರಾದ ಐವಾನ್ ಡಿಸೋಜಾ , ರಮೇಶ್ ಬಾಬು ಮತ್ತಿತರ ಸದಸ್ಯರು ಗ್ಯಾಸ್ ಸಮಸ್ಯೆ ಕುರಿತು ವಿಷಯ ಪ್ರಸ್ತಾಪಿಸಿದಾಗ, ಉತ್ತರಿಸಿದ ಸಚಿವ ಮುನಿಯಪ್ಪ , ಕಾಳಸಂತೆಯಲ್ಲಿ ಗ್ಯಾಸ್ ಪೂರೈಕೆದಾರರು ಸಿಲಿಂಡರ್‌ಗಳನ್ನು ಮಾರಾಟ ಮಾಡಬಾರದು. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದರೇ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪ್ರತಿದಿನ 3,50 921 ಸಿಲಿಂಡರ್‌ಗಳ ಅಗತ್ಯವಿದೆ. ಆದರೆ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದ ನಮ ಬೇಡಿಕೆಗೆ ತಕ್ಕಂತೆ ಗ್ಯಾಸ್ ಪೂರೈಕೆ ಆಗುತ್ತಿಲ್ಲ. ಎಲ್‌ಪಿಜಿ ಕೊರತೆಗೆ ಸಂಬಂಧಿಸಿದ ಸಮಸ್ಯೆ ಇನ್ನೂ ಒಂದು ವಾರ ಇರುತ್ತದೆ. ಇದನ್ನು ಅರಿತು ಹೋಟೆಲ್ ಮಾಲೀಕರು ಪರಿಸ್ಥಿತಿಗೆ ಹೊಂದಿಕೊಂಡು ಸಹಕರಿಸಬೇಕು. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಮುಂದಿನ 1 ವಾರದವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್‌ಪಿಜಿ ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಮಾಲೀಕರು ತಾಳೆಯಿಂದಿರಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ನಿತ್ಯ 44,000 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೇಕು. ಶೇ.20ರಂತೆ ನಮಗೆ 9,000 ಸಿಲಿಂಡರ್ ಸಿಗುತ್ತೆ. ಇದರಲ್ಲಿ 4,000 ಆಸ್ಪತ್ರೆಗಳಿಗೆ ಹೋಗುತ್ತೆ. ಆಟೋಗಳಿಗೆ 2,500 ಪೂರೈಕೆ ಹಾಗೂ ಹೋಟೆಲ್‌ಗಳಿಗೆ ನಿತ್ಯ 1,000 ಸಿಲಿಂಡರ್ ಕೊಡಲು ನಿರ್ಧಾರ ಮಾಡಲಾಗಿದೆ. ತೈಲ ಕಂಪನಿಗಳೊಂದಿಗೆ ನಡೆಸಿದ ಸಭೆಯಲ್ಲಿ ಆದ್ಯತಾ ಸೇವೆಗಳೆಂದು ಪರಿಗಣಿಸಲಾಗಿರುವ ಆಸ್ಪತ್ರೆಗಳು, ಹಾಸ್ಟೆಲ್, ವಸತಿ ಶಾಲೆಗಳು, ಆಟೋ ಸೇರಿದಂತೆ ಇನ್ನಿತರ 5-6 ವಲಯಗಳಿಗೆ ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
