ಬಿಸಿಲ ನಗರಿ ವಿಜಯಪುರದಲ್ಲಿ ನಿನ್ನೆ ರಾತ್ರಿ ವರುಣನ ಅಬ್ಬರ ಜೋರಾಗಿದ್ದು, ಜಿಲ್ಲೆಯಾದ್ಯಂತ ಅಕಾಲಿಕ ಆಲಿಕಲ್ಲು ಮಳೆಯಾಗಿದೆ. ಕಳೆದ ಹಲವು ದಿನಗಳಿಂದ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆ ತಂಪು ನೀಡಿದರೂ, ರೈತರ ಪಾಲಿಗೆ ಈ ಮಳೆ ಕಣ್ಣೀರು ತರಿಸಿದೆ.

ಜಿಲ್ಲೆಯ ಮುದ್ದೇಬಿಹಾಳ, ನಿಡಗುಂದಿ, ಬಸವನಬಾಗೇವಾಡಿ, ಕೊಲ್ದಾರ ಹಾಗೂ ಮುಳವಾಡ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಗಾಳಿ ಮತ್ತು ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮಳೆಯೊಂದಿಗೆ ಬಿದ್ದ ಆಲಿಕಲ್ಲುಗಳ ಪ್ರಮಾಣ ಎಷ್ಟಿತ್ತೆಂದರೆ, ಹಲವೆಡೆ ರಸ್ತೆಗಳು ಬಿಳಿ ಹರಳುಗಳಿಂದ ಆವೃತವಾದಂತಾಗಿದ್ದವು. ಈ ದೃಶ್ಯವನ್ನು ಕಂಡ ಸ್ಥಳೀಯರು ಕುತೂಹಲದಿಂದ ಆಲಿಕಲ್ಲುಗಳನ್ನು ಪಾತ್ರೆಗಳಲ್ಲಿ ತುಂಬಿಕೊಂಡು ಸಂಭ್ರಮಿಸಿದ ದೃಶ್ಯಗಳೂ ಕಂಡುಬಂದವು.
ವಿಶೇಷವಾಗಿ ಮುದ್ದೇಬಿಹಾಳ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯ ಅಬ್ಬರ ಹೆಚ್ಚಾಗಿದ್ದು, ರಸ್ತೆಗಳು ಮಂಜು ಬಿದ್ದಂತೆಯೇ ಬಿಳಿ ಬಣ್ಣಕ್ಕೆ ತಿರುಗಿದ್ದವು. ಬಿರುಗಾಳಿಯ ಪರಿಣಾಮ ಕೆಲವೆಡೆ ಮರಗಿಡಗಳು ಧರೆಗುರುಳಿದ ಘಟನೆಗಳೂ ವರದಿಯಾಗಿವೆ.
ಮಳೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಕೆಲ ಹೊತ್ತು ತೊಂದರೆ ಅನುಭವಿಸಿದರೂ, ಕಳೆದ 15 ದಿನಗಳಿಂದ ಕಾದಿದ್ದ ಬಿಸಿಲಿನ ನಡುವೆ ಸುರಿದ ಮಳೆಯು ವಾತಾವರಣವನ್ನು ತಂಪಾಗಿಸಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಕೊಯ್ಲಿಗೆ ಬಂದಿದ್ದ ಬೆಳೆಗಳು ನೆಲಕಚ್ಚಿದ್ದು, ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರು ಆತಂಕಕ್ಕೀಡಾಗಿದ್ದಾರೆ.
ಇದಲ್ಲದೆ ಗಾಳಿ-ಮಳೆಯ ಪರಿಣಾಮವಾಗಿ ವಿಜಯಪುರ ರಾತ್ರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಸಾರ್ವಜನಿಕರು ಕತ್ತಲಿನಲ್ಲಿ ಕಾಲ ಕಳೆಯಬೇಕಾಯಿತು.
