ವಿಜಯಪುರ ಜಿಲ್ಲೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಲಭ್ಯತೆ ಇಲ್ಲದ ಕಾರಣ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಊಟದ ವ್ಯವಸ್ಥೆಯಲ್ಲಿ ಯಾವುದೇ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಹೋಟೆಲ್ ಮಾಲೀಕರು ಸೌದೆ ಒಲೆಗಳಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದ್ದಾರೆ. ಗ್ರಾಹಕರಿಗೆ ಊಟ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ಹೋಟೆಲ್ ಮಾಲೀಕರು ತಿಳಿಸಿದ್ದಾರೆ. ಇನ್ನೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಇಂದಿರಾ ಕ್ಯಾಂಟೀನ್ ಗಳಿಗೆ ತೊಂದರೆಯಾಗಿದೆ. ಸಿಲಿಂಡರ್ ಗಳಿಲ್ಲದೆ ಅಡುಗೆ ಮಾಡಲು ಸಮಸ್ಯೆಯಾಗುತ್ತಿದ್ದು, ಇದರಿಂದ ಕ್ಯಾಂಟೀನ್ ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈಗಾಗಲೇ ಜಿಲ್ಲೆಯ ಎರಡು ಇಂದಿರಾ ಕ್ಯಾಂಟೀನ್ ಗಳು ಮುಚ್ಚಿದ್ದು, ನಗರದ ಆರು ಕ್ಯಾಂಟೀನ್ ಗಳಲ್ಲಿ ಆಹಾರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
