ಬೆಳಗಾವಿಯಲ್ಲಿ ಇಂದು ಮಧ್ಯಾಹ್ನ ಸುರಿದ ಧಾರಾಕಾರ ಆಲಿಕಲ್ಲು ಮಳೆ ಅವಾಂತರವನ್ನೇ ಸೃಷ್ಟಿಸಿದೆ. ಪ್ರಮುಖವಾಗಿ ಖಾಸಬಾಗದ ಶೃಂಗೇರಿ ಕಾಲೋನಿ ಸಂಪೂರ್ಣ ಜಲಾವೃತವಾಗಿದ್ದು, ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ನಗರದಲ್ಲಿ ಮಂಗಳವಾರ ಮಧ್ಯಾಹ್ನ ಆರಂಭವಾದ ಅಬ್ಬರದ ಆಲಿಕಲ್ಲು ಮಳೆಗೆ ಬೆಳಗಾವಿ ತತ್ತರಿಸಿ ಹೋಗಿದೆ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಅದರಲ್ಲೂ ಖಾಸಬಾಗದ ಶೃಂಗೇರಿ ಕಾಲೋನಿಯಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳೆಲ್ಲವೂ ನದಿಗಳಂತೆ ಮಾರ್ಪಟ್ಟಿದ್ದು, ಸ್ಥಳೀಯರು ಮನೆ ಬಿಟ್ಟು ಹೊರಬರಲು ಸಾಧ್ಯವಾಗದಂತೆ ಇಡೀ ಬಡಾವಣೆ ದ್ವೀಪದಂತಾಗಿದೆ. ಮಳೆಯ ನೀರು ಮನೆಗಳ ಒಳಗೆ ನುಗ್ಗಿದ್ದರಿಂದ ದೈನಂದಿನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಈ ಅವಾಂತರಕ್ಕೆ ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದ ರಸ್ತೆ ಕಾಮಗಾರಿಗಳೇ ಕಾರಣ ಎಂದು ನಾಗರಿಕರು ನೇರವಾಗಿ ದೂರಿದ್ದಾರೆ. ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದಂತಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. “ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಮಾಡಿದ ಕಾಮಗಾರಿ ನಮಗೆ ಕಂಟಕವಾಗಿ ಪರಿಣಮಿಸಿದೆ” ಎಂದು ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದು, ತಕ್ಷಣವೇ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
