ಬೆಳಗಾವಿಯಲ್ಲಿ ವ್ಯಾಪಾರಿಗಳಿಗೆ ಪಂಗನಾಮ ಹಾಕಲು ಯತ್ನಿಸಿದ್ದ ಅಂತರರಾಜ್ಯ ಖೋಟಾ ನೋಟು ಜಾಲದ ಕಿಲಾಡಿಗಳಿಗೆ ಈಗ ನ್ಯಾಯಾಂಗ ಬಂಧನದ ಭೀತಿ ಎದುರಾಗಿದೆ. ನಗರ ಪೊಲೀಸ್ ಆಯುಕ್ತರ ಭರ್ಜರಿ ಕಾರ್ಯಾಚರಣೆಯ ಬಳಿಕ, ಬಂಧಿತ ನಾಲ್ವರು ಆರೋಪಿಗಳನ್ನು ಮಾರ್ಚ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ನಗರದ ಖಡೇಬಜಾರ್ ಹಾಗೂ ಬಾಜಿ ಮಾರ್ಕೆಟ್ ಪ್ರದೇಶದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಗೋವಾ ಮತ್ತು ಬಿಹಾರ ಮೂಲದ ನಾಲ್ವರು ಆರೋಪಿಗಳನ್ನು ಬೆಳಗಾವಿ ಜೆ.ಎನ್.ಎಂ.ಸಿ ಎರಡನೇ ನ್ಯಾಯಾಲಯವು ಮಾರ್ಚ್ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ಕುರಿತು ಮಾಧ್ಯಮಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರು, ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 495 ನಕಲಿ ನೋಟುಗಳು, ಒಂದು ಸ್ವಿಫ್ಟ್ ಕಾರು ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ವ್ಯಾಪಾರಿಯೊಬ್ಬರು ನೀಡಿದ ಸಮಯೋಚಿತ ಮಾಹಿತಿಯಿಂದ ಈ ಬೃಹತ್ ಜಾಲವನ್ನು ಭೇದಿಸಲು ಸಾಧ್ಯವಾಯಿತು” ಎಂದು ವಿವರಿಸಿದರು.

ಈ ಜಾಲವು ಕೇವಲ ಬೆಳಗಾವಿ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಾರ್ಕೆಟ್ ಠಾಣೆಯ ಇನ್ಸ್‌ಪೆಕ್ಟರ್ ಜೆ.ಎಂ. ಕಾಲಮಿರ್ಚಿ ನೇತೃತ್ವದ ತಂಡದ ಕಾರ್ಯದಕ್ಷತೆಯನ್ನು ಆಯುಕ್ತರು ಶ್ಲಾಘಿಸಿದ್ದಾರೆ. ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಸಣ್ಣ ವ್ಯಾಪಾರಿಗಳು 500 ರೂಪಾಯಿ ನೋಟುಗಳನ್ನು ಸ್ವೀಕರಿಸುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಮತ್ತು ಯಾವುದೇ ಅನುಮಾನ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದರು.

